ತಮ್ಮ ಶಾಲಾ – ಕಾಲೇಜು ದಿನಗಳನ್ನು ಬೆಂಗಳೂರು ರಾಮಕೃಷ್ಣ ಮಠದ ನಿಕಟ ಸಂಪರ್ಕದಲ್ಲಿ ಕಳೆದ ಎಚ್.ವಿ.ವಿಶ್ವನಾಥ್ (೧೯೬೨), ಅಲ್ಲಿನ ವಿವೇಕಾನಂದ ಬಾಲಕಸಂಘ, ಯುವಕಸಂಘಗಳ ಸಕ್ರಿಯ ಸದಸ್ಯರಾಗಿ ಪೂರ್ಣ ಲಾಭ ಪಡೆದರು. ಅಲ್ಲಿನ ವೃಂದಗಾನ, ಸಾಹಿತ್ಯಕ-ವೈಚಾರಿಕ ಚಟುವಟಿಕೆಗಳಲ್ಲಿ ಬಾಲ್ಯದಿಂದಲೂ ಹೆಚ್ಚಿನ ಒಲವು. ಬಿ.ಇ. ಪದವಿಯ ಬಳಿಕ ಕೆಲಕಾಲ ಅಧ್ಯಾಪನ ವೃತ್ತಿ ನಡೆಸಿದರೂ, ಸಂಘದ ಮುಖ್ಯಸ್ಥರಾಗಿದ್ದ ಪೂಜ್ಯ ಸ್ವಾಮಿ ಪುರುಷೋತ್ತಮಾನಂದಜೀ ಅವರ ಆದೇಶದಂತೆ, ರಾಮಕೃಷ್ಣ-ವಿವೇಕಾನಂದ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ಪೂರ್ಣಾವಧಿ ತೊಡಗಿಸಿಕೊಂಡು ಬರಹ-ಸಂಪಾದನೆ-ಅನುವಾದಗಳನ್ನೇ ವೃತ್ತಿಯಾಗಿಸಿಕೊಂಡರು. ಗಾಯನ ಹಾಗೂ ಬೋಧನೆಗಳ ಮೇಲಿನ ಒಲವಿನಿಂದಾಗಿ, ಮುಂದೆ ಹಲವಾರು ವರ್ಷಕಾಲ ರಾಮಕೃಷ್ಣ ಯೋಗಾಶ್ರಮ, ಶಾರದಾ ಸೇವಾಶ್ರಮ ಮುಂತಾದ ಸಂಸ್ಥೆಗಳ ಸದಸ್ಯರಿಗೆ ಭಜನೆ ಹೇಳಿಕೊಡುತ್ತ, ಕಾರ್ಯಕ್ರಮಗಳ ನೇತೃತ್ವ ವಹಿಸಿದರು. ಗುರುಸನ್ನಿಧಿಯಲ್ಲಿ ತಾವು ಕಲಿತ ಅಸಂಖ್ಯ ಸದ್ವಿಚಾರಗಳನ್ನು ಹಾಗೂ ದಿವ್ಯತ್ರಯರ ಸಂದೇಶಗಳನ್ನು ಭಜನೆಯ ಸುಲಭೋಪಾಯದ ಮೂಲಕ ಸಮಸ್ತ ಸಮಾಜದಲ್ಲಿ ಪಸರಿಸುವ ಉತ್ಸಾಹದಿಂದ ‘ಶಾರದಾ ಗುರುಕುಲ’ ಸ್ಥಾಪನೆಗೊಂಡಿತು. ಕಿರಿಯರೊಂದಿಗೆ ಬೆರೆಯುವ, ಅವರನ್ನು ಒಗ್ಗೂಡಿಸುವ ಸಹಜ ಮನೋಧರ್ಮ ಇದಕ್ಕೆ ಸಹಕಾರಿಯಾಗಿದೆ. ಸಮಾನಮನಸ್ಕರೊಡಗೂಡಿ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಸತ್ಸಂಕಲ್ಪ.