Blogs

ಸಂಘದಲ್ಲಿ ಕಲಿತ ಪಾಠ: ಯಾವಜ್ಜೀವ ಸದಸ್ಯತ್ವ

ವಿವೇಕಾನಂದ ಬಾಲಕಸಂಘ (ಹಾಗೂ ಅದರ ಮುಂದುವರಿಕೆಯಾದ ವಿವೇಕಾನಂದ ಯುವಕಸಂಘ) ಬೆಂಗಳೂರು ರಾಮಕೃಷ್ಣ ಮಠದ ಆಶ್ರಯದಲ್ಲಿ ಕಳೆದ ೫೨ ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಸ್ಥೆ. ಬಾಲಕರ ಸರ್ವತೋಮುಖ ಬೆಳವಣಿಗೆ, ಮುಖ್ಯವಾಗಿ ವ್ಯಕ್ತಿತ್ವ ನಿರ್ಮಾಣ, ಶೀಲನಿರ್ಮಾಣ, ಇದು ಸಂಘದ ಗುರಿ; ಅದಕ್ಕೆ ತಕ್ಕಂತೆ ಅದರ ಚಟುವಟಿಕೆಗಳು. ಬಾಲಕರ ಶಾರೀರಿಕ, ಬೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ ವಿಕಾಸನಕ್ಕಾಗಿ ಇಲ್ಲಿನ ಸೌಲಭ್ಯಗಳು ಹತ್ತಾರು. ಆಟೋಟಗಳು, ಯೋಗಾಸನ-ಜಿಮ್ನಾಸಿಯಂಗಳು, ಸುಸಜ್ಜಿತ ಗ್ರಂಥಾಲಯ; ಕರ್ಮಯೋಗದ ಅನುಷ್ಠಾನಕ್ಕೆ ನೆರವಾಗುವ ವೈವಿಧ್ಯಮಯ ಸೇವಾ ಚಟುವಟಿಕೆಗಳು; ಪ್ರಾರ್ಥನೆ-ವೇದಮಂತ್ರ-ಭಜನೆ-ಸ್ತೋತ್ರಾದಿಗಳಲ್ಲಿ ನುರಿತವರಿಂದ ಶಿಕ್ಷಣ; ಹಿರಿಯರಿಂದ ಉಪನ್ಯಾಸ-ತರಗತಿಗಳು; ಕಾಲಕಾಲಕ್ಕೆ ಪ್ರಸಾದರೂಪದ ತಿಂಡಿ-ತೀರ್ಥ; ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಜಯಂತ್ಯುತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸದವಕಾಶ; ಶೈಕ್ಷಣಿಕ-ವೈಯಕ್ತಿಕ ವಿಚಾರಗಳಲ್ಲಿ ಮಾರ್ಗದರ್ಶನ; ಹತ್ತಾರು ಬಗೆಯ ಸ್ಪರ್ಧೆಗಳು-ಬಹುಮಾನಗಳು; ಇದಲ್ಲದೆ ಹೆಚ್ಚು ಅರ್ಹರಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನ ಮತ್ತಿತರ ಪ್ರೋತ್ಸಾಹಕ ಉಡುಗೊರೆಗಳು: ಒಂದೇ ಎರಡೇ! ಇವುಗಳ ಜೊತೆಗೆ ಸಮಾನಮನಸ್ಕರೂ ಸಚ್ಚರಿತ್ರರೂ ಆದ ಸ್ನೇಹಿತರ ಸಹವಾಸಲಾಭ. ಅದಕ್ಕೂ ಮಿಗಿಲಾಗಿ, ಈ ಸಂಘದ ಜವಾಬ್ದಾರಿ ಹೊತ್ತ ಒಬ್ಬರು ಸಮರ್ಥ ಆಶ್ರಮವಾಸಿಯ ವಾತ್ಸಲ್ಯಪೂರ್ಣ ಬೆಂಬಲ, ಮಾರ್ಗದರ್ಶನ! ಜೊತೆಗೆ, ಇತರ ಅನೇಕ ಸಾಧುಗಳ ಸತ್ಸಂಗ. ಇಂಥ ಅಪೂರ್ವ ತಾಣ ಎಷ್ಟೋ ಹುಡುಗರ ಪಾಲಿಗೆ ತಮ್ಮ ಮನೆಗಿಂತಲೂ ಹೆಚ್ಚು ಪ್ರಿಯವಾದರೆ ಆಶ್ಚರ್ಯವೇನು? ಇದು ಎರಡು ದಶಕಗಳ ಹಿಂದಿನ ಚಿತ್ರ.

ಪರಚಿಂತೆ ಎಮಗೆ ಬೇಕಯ್ಯಾ!

ದೊಡ್ಡವರ ಬುದ್ಧಿಮಾತನ್ನು ನಮಗೆ ಬೇಕಾದಂತೆ ತಿರುಗಿಸುವುದು; ಪ್ರಸಿದ್ದವಾದ ಹೇಳಿಕೆಯನ್ನು ನಮ್ಮ ಸಂದರ್ಭಕ್ಕೆ ಒದಗುವ ಹಾಗೆ, ಮೂಲೋದ್ದೇಶಕ್ಕೆ ವಿರುದ್ಧವಾಗಿ ಅರ್ಥೈಸುವುದು; ಇವೆಲ್ಲ ಎಲ್ಲರೂ ಬಲ್ಲ ಹಳೆಯ ವಿದ್ಯಮಾನವೇ. ಈ ತರದ ‘ಅನುಕೂಲವೇದಾಂತ’ ಬಹುಶಃ ವೇದಾಂತಕ್ಕಿಂತಲೂ ಪ್ರಾಚೀನ! ಆದರೂ ‘ಪರಚಿಂತೆ ಎಮಗೆ ಏಕೆ, ಅಯ್ಯಾ?’ ಎಂಬ ಬಸವಣ್ಣನವರ ಪ್ರಶ್ನೆಯ ರೂಪದ (ಹಿತ) ವಚನಕ್ಕೆ ಪ್ರತಿಯಾಗಿ ‘ಪರಚಿಂತೆ ಎಮಗೆ ಬೇಕು, ಬೇಕೇ..ಬೇಕು!’ ಎಂದು ಸಾರುವ ಈ ಬೇ-ಜವಾಬ್ ಶೀರ್ಷಿಕೆಯನ್ನು ನೋಡಿ ಹಿಂದಿನವರು (ಈಗಲೂ ಇರುವವರು) ಬೇ-ಸರಿಸಿ ಹುಬ್ಬುಗಂಟಿಕ್ಕಿದರೆ ಆಶ್ಚರ್ಯವೇನಿಲ್ಲ.

ಪುರುಷಮಣಿ, ಪರುಷಮಣಿ

ಮಹಾತ್ಮರನ್ನು, ವಿಭೂತಿಪುರುಷರನ್ನು, ಉಳಿದವರು ಆದರಿಸಿ ಆರಾಧಿಸುವಲ್ಲಿ ಎರಡು ವಿಭಿನ್ನ ದೃಷ್ಟಿಕೋನಗಳಿರುತ್ತವೆ. ಮೊದಲನೆಯದು, ಆತನ ಶಕ್ತಿ-ಸಾಮರ್ಥ್ಯದ ಬಗ್ಗೆ ನಮ್ಮಲ್ಲಿ ಸಹಜವಾಗಿ ಸ್ಪುರಿಸುವ ವಿಸ್ಮಯ, ಗೌರವ. ಇತರರಿಗೆ ಸುಲಭಸಾಧ್ಯವಲ್ಲದ ಎತ್ತರಕ್ಕೆ ಒಬ್ಬ ವ್ಯಕ್ತಿ ಏರಿದನೆಂದರೆ ಆತನಲ್ಲಿ ಏನೋ ವಿಶೇಷತೆ ಇದ್ದಿರಲೇ ಬೇಕು; ಅದನ್ನು ಆತ ತನ್ನ ತಪಸ್ಸು-ಸಾಧನೆಗಳಿಂದ ಪಡೆದುಕೊಂಡಿರಬಹುದು. ಅಥವಾ ಭಗವಂತನ ಕೃಪೆಯಿಂದ ನಿರಾಯಾಸವಾಗಿ ಗಳಿಸಿರಬಹುದು; ಆದರೆ ಎರಡೂ ಆತನ ಮಹಿಮೆಯ ದ್ಯೋತಕವೇ ಎಂಬ ಅರಿವಿನಿಂದ ಇತರರು ಸಹಜವಾಗಿ ಆತನೆದುರು ತಲೆಬಾಗುತ್ತಾರೆ. ಈ ವ್ಯಕ್ತಿಗಳು ನಮಗೆ, ನಮ್ಮ ನಿತ್ಯದ ವೈಯಕ್ತಿಕ ಜೀವನಕ್ಕೆ ನೇರವಾಗಿ ಸಂಬಂಧ ಪಡೆದಿರಬಹುದು. ಆದರೆ ಅವರ ಜೀವನ-ಸಾಧನೆಗಳು ಬೇರೆ ಎಲ್ಲರಿಗೂ ಶಾಶ್ವತ ಸ್ಪೂರ್ತಿಯ ಮೂಲ. ದೂರದ ಧ್ರುವನಕ್ಷತ್ರದಂತೆ ಅವರ ಅಸ್ತಿತ್ವ, ಪಯಣಿಗರಿಗೆ ಸದಾ ಪ್ರಖರ-ನಿಖರ-ನಿರ್ಧಿಷ್ಟವಾಗಿ ದಿಕ್ಕು ತೋರುವ ಕಾಯಕ ಅವರದ್ದು. ತಾರಾಮಂಡಲದಲ್ಲಿ ಇವರ ಸ್ಥಾನ ವಿಶಿಷ್ಟ. ಅವರ ಎತ್ತರ-ಬಿತ್ತರ ನಮ್ಮ ಕೈಯಳತೆಗೆ ಸಿಕ್ಕುವುದಲ್ಲ. ಅದನ್ನು ಕಾಣುತ್ತ, ಅದನ್ನೇ ನಂಬಿ ಪಯಣಿಸಬಲ್ಲ ಧೀರ ಸಾಹಸಿಗರಿಗೆ ಈ ನಕ್ಷತ್ರ ಅಮೂಲ್ಯ.

ಸಂಘಸೂತ್ರದಾರಿ ಸ್ವಾಮೀಜಿ

ಸಂಘವೊಂದರ ಉನ್ನತ ಆದರ್ಶಗಳನ್ನು ಆಚರಿಸಿ ತೋರಿಸುತ್ತ ಅದರ ನಾಯಕರೆನಿಸಿದವರು ಹೇಗೆ ತಾವೇ ಸಂಘಕ್ಕೆ ಮಾದರಿಯಾಗಬಹುದು, ಆ ಆದರ್ಶಗಳ ಸಾಕಾರರೆನಿಸಬಹುದು, ಸದಸ್ಯರ ಮೇಲೆ ಶಾಶ್ವತ ಸತ್ಪ್ರಭಾವ ಬೀರಬಹುದು ಎಂಬುದರ ಸ್ಥೂಲವಿಶ್ಲೇಷಣೆ ಈ ಲೇಖನದ ಉದ್ದೇಶ. ಶ್ರೀಮತ್ ಸ್ವಾಮಿ ಪುರುಷೋತ್ತಮಾನಂದಜೀ ಅವರ ವ್ಯಕ್ತಿತ್ವದ, ಸಾಧನೆಗಳ ಮುಖಗಳು ಹತ್ತಾರು; ಅವುಗಳ ಪರಿಚಯವಿರುವ ಸಾರ್ವಜನಿಕರು ಸಹಸ್ರಾರು. ಸ್ವಾಮಿಜೀಯವರನ್ನು ಕಂಡ, ಅವರೊಂದಿಗೆ ಒಡನಾಡಿದ ಯಾರನ್ನೂ ಅವರ ನೆನಪು ಹಿಂಬಾಲಿಸದೆ ಬಿಡದು. ಓಜಸ್ಸು, ಪೌರುಷಗಳನ್ನು ಬಿಂಬಿಸುತ್ತಿದ್ದ ಅವರ ಮುಖಭಾವ-ನಡಿಗೆ-ಚಲನವಲನಗಳು ಜನಮನದಲ್ಲಿ ಸ್ಥಿರವಾಗಿದೆ. ಭಾವ-ಭಕ್ತಿ-ಸಂಗೀತ ಸಮರಸಪೂರ್ಣವಾದ ಅವರ ಭಜನಸುಧೆ ಅಸಂಖ್ಯ ಭಕ್ತರ ಮನೆ-ಮನಗಳಲ್ಲಿ ನಿತ್ಯ ಅನುರಣಿಸುತ್ತಿದೆ. ಅವರ ಸಹಜ ಸರಸ ಸುಲಲಿತ ನಿಶಿತ ನಿಶ್ಚಿತ ವಾಗ್ಝರಿ, ಕೇಳಿದವರ ಕಿವಿಗಳಲ್ಲಿ ಇನ್ನೂ ಮೊಳಗುತ್ತಿದೆ… ಈ ಬಗೆಯ ನೆನಪುಗಳು ಇನ್ನೆಷ್ಟೋ!
Scroll to top