ಸಂಘಸೂತ್ರದಾರಿ ಸ್ವಾಮೀಜಿ

ಕನ್ನಡನಾಡಿನ ಅಸಂಖ್ಯ ಸ್ತ್ರೀಪುರುಷರನ್ನು, ಆಬಾಲವೃದ್ಧರನ್ನು ಶ್ರೀರಾಮಕೃಷ್ಣ-ಶ್ರೀ ಮಾತೆಯರ ಮಡಿಲಿಗೆ ತಂದುಹಾಕುವಲ್ಲಿ ಅವರ ಒಬ್ಬ ಪ್ರಮುಖ ಪ್ರಮಥರಂತೆ, ಪ್ರತಿನಿಧಿತಂತೆ ಪರಿಶ್ರಮಿಸಿದ ಶ್ರೀಮತ್ ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ನಮ್ಮನ್ನಗಲಿ ಇದೇ ಫೆಬ್ರವರಿ ೨೫ಕ್ಕೆ ಒಂದು ವರ್ಷ ಕಳೆಯುತ್ತದೆ. ಭೌತಿಕರೂಪದಿಂದ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮಾತು-ಕೃತಿಗಳನ್ನು ಮೆಲುಕು ಹಾಕುತ್ತ ಅರ್ಥ ಮಾಡಿಕೊಂಡಂತೆಲ್ಲ ನಮಗೆ ಅವರಿತ್ತ ಸ್ಪೂರ್ತಿಯ ಕಿಡಿ ಮತ್ತಷ್ಟು ಉಜ್ವಲವಾಗುತ್ತಿದೆ. ಅದು ಜ್ವಲಂತಜ್ಯೋತಿಯಾಗಿ ಬೆಳಗಲೆಂದು ಹಾರೈಸುವ
ವಿವೇಕಹಂಸ

ಸಂಘಸೂತ್ರದಾರಿ ಸ್ವಾಮೀಜಿ
ಎಚ್.ವಿ.ವಿಶ್ವನಾಥ
ನಿರ್ದೇಶಕ, ‘ಶಾರದಾ ಗುರುಕುಲ’, ಶ್ರೀನಗರ, ಬೆಂಗಳೂರು ೫೦. ಫೋನ್: ೯೮೪೫೮೧೫೪೬೭

ಸಂಘವೊಂದರ ಉನ್ನತ ಆದರ್ಶಗಳನ್ನು ಆಚರಿಸಿ ತೋರಿಸುತ್ತ ಅದರ ನಾಯಕರೆನಿಸಿದವರು ಹೇಗೆ ತಾವೇ ಸಂಘಕ್ಕೆ ಮಾದರಿಯಾಗಬಹುದು, ಆ ಆದರ್ಶಗಳ ಸಾಕಾರರೆನಿಸಬಹುದು, ಸದಸ್ಯರ ಮೇಲೆ ಶಾಶ್ವತ ಸತ್ಪ್ರಭಾವ ಬೀರಬಹುದು ಎಂಬುದರ ಸ್ಥೂಲವಿಶ್ಲೇಷಣೆ ಈ ಲೇಖನದ ಉದ್ದೇಶ.

ಶ್ರೀಮತ್ ಸ್ವಾಮಿ ಪುರುಷೋತ್ತಮಾನಂದಜೀ ಅವರ ವ್ಯಕ್ತಿತ್ವದ, ಸಾಧನೆಗಳ ಮುಖಗಳು ಹತ್ತಾರು; ಅವುಗಳ ಪರಿಚಯವಿರುವ ಸಾರ್ವಜನಿಕರು ಸಹಸ್ರಾರು. ಸ್ವಾಮಿಜೀಯವರನ್ನು ಕಂಡ, ಅವರೊಂದಿಗೆ ಒಡನಾಡಿದ ಯಾರನ್ನೂ ಅವರ ನೆನಪು ಹಿಂಬಾಲಿಸದೆ ಬಿಡದು. ಓಜಸ್ಸು, ಪೌರುಷಗಳನ್ನು ಬಿಂಬಿಸುತ್ತಿದ್ದ ಅವರ ಮುಖಭಾವ-ನಡಿಗೆ-ಚಲನವಲನಗಳು ಜನಮನದಲ್ಲಿ ಸ್ಥಿರವಾಗಿದೆ. ಭಾವ-ಭಕ್ತಿ-ಸಂಗೀತ ಸಮರಸಪೂರ್ಣವಾದ ಅವರ ಭಜನಸುಧೆ ಅಸಂಖ್ಯ ಭಕ್ತರ ಮನೆ-ಮನಗಳಲ್ಲಿ ನಿತ್ಯ ಅನುರಣಿಸುತ್ತಿದೆ. ಅವರ ಸಹಜ ಸರಸ ಸುಲಲಿತ ನಿಶಿತ ನಿಶ್ಚಿತ ವಾಗ್ಝರಿ, ಕೇಳಿದವರ ಕಿವಿಗಳಲ್ಲಿ ಇನ್ನೂ ಮೊಳಗುತ್ತಿದೆ… ಈ ಬಗೆಯ ನೆನಪುಗಳು ಇನ್ನೆಷ್ಟೋ!

ಅಭಿಮಾನವಳಿಯದವರು : ಇವೆಲ್ಲ ಒಂದು ಬಗೆ; ಈ ಅನುಭವ-ಅಭಿಮತಗಳು ‘ಸಾರ್ವಜನಿಕ ಸ್ವತ್ತು’. ಆದರೆ, ಸ್ವಾಮಿಜೀಯವರ ಸಹ-ವಾಸದಲ್ಲಿ ಇವೆಲ್ಲಕ್ಕಿಂತ ವಿಭಿನ್ನವಾದ ಅನುಭವ ಸಂಪತ್ತನ್ನು ಗಳಿಸಿದ ಭಾಗ್ಯಶಾಲೀ ವರ್ಗವೊಂದಿದೆ. ಅದು, ಬೆಂಗಳೂರು ರಾಮಕೃಷ್ಣ ಮಠದ ‘ವಿವೇಕಾನಂದ ಬಾಲಕ-ಯುವಕ ಸಂಘ’ಗಳ ಸದಸ್ಯರದು. ಸ್ವಾಮಿ ಪುರುಷೋತ್ತಮಾನಂದಜೀಯವರು ನಿರ್ದೇಶಕರಾಗಿದ್ದ ಸುಮಾರು ಮೂವತ್ತು ವರ್ಷಗಳಲ್ಲಿ ಕೆಲಕಾಲವಾದರೂ ಈ ಅವಳಿ ಸಂಘಗಳ ಸದಸ್ಯರಾಗಿದ್ದವರ ಸಂಖ್ಯೆ ಒಂದೆರಡು ಸಾವಿರವಾದರೂ ಇದ್ದೀತು. ಸಂಘದ ಹಾಗೂ ಆಶ್ರಮದ ಸತ್ಸಂಗದಲ್ಲಿ ಅವರೆಲ್ಲರೂ ಗಳಿಸಿದ ವೈವಿಧ್ಯಮಯ ಅನುಭವಗಳ, ಪಡೆದ ಲಾಭದ ಮೌಲ್ಯಗಳನ್ನು ಅಳೆಯಲು ಸಾಧ್ಯವಿಲ್ಲ. ಮತ್ತು ಆ ಅನುಭವಗಳ ಮಟ್ಟವು ಆಯಾ ಬಾಲಕರ ವಯಸ್ಸು, ಸಂಪರ್ಕದ ಅವಧಿ, ಅವರವರ ವ್ಯಕ್ತಿತ್ವ-ಸ್ವಭಾವ-ಅರ್ಹತೆ ಇವುಗಳಿಗೆ ತಕ್ಕಂತಿರುವುದೂ ಸಹಜವೇ. ಕೆಲವೇ ವಾರ-ತಿಂಗಳ ಕಾಲ ಈ ಸಂಘದಲ್ಲಿ ಇದ್ದು, ನಾನಾ ಕಾರಣಗಳಿಂದ ಬಿಟ್ಟುಹೋಗುತ್ತಿದ್ದವರ ಸಂಖ್ಯೆ ಗಣನೀಯ. ಯಾವುದೇ ಸದ್ವಿಚಾರವನ್ನಾಗಲಿ ತಿಳಿದು ಮೆಚ್ಚಬಲ್ಲ ಬೌದ್ಧಿಕ ಸಾಮರ್ಥ್ಯವೂ ಇಲ್ಲದವರು ಇನ್ನೆಷ್ಟೋ. ಇನ್ನು, ತಮ್ಮ ಸಂಗಡಿಗರ ಕುರಿತಾದ ಕಹಿ ನೆನಪೊಂದೇ ಉಳಿದುಕೊಂಡವರೂ ಸಾಕಷ್ಟಿದ್ದಾರು! ತುಂಟಾಟದ ಆ ಅಪ್ರಬುದ್ಧ ವಯಸ್ಸಿನಲ್ಲಿ ಅಂಥ ಪ್ರಸಂಗಗಳು ನಡೆದಿರುವುದು ಸಹಜವೇ. ಹಾಗೆಯೇ ನಾನಾ ವಿಧದ ಅಶಿಸ್ತಿನ ಕಾರಣದಿಂದ ದೊಡ್ಡವರಿಂದ ಛೀಮಾರಿಗೆ ಒಳಗಾಗಿ ‘ನೊಂದು’ ಬಿಟ್ಟವರೂ ಕಡಿಮೆಯಿಲ್ಲ. ಆದರೆ ಆ ಪ್ರತಿಯೊಬ್ಬನ ಮನಸ್ಸಿನಲ್ಲೂ ಇಂದಿಗೂ ನಿಚ್ಚಳವಾಗಿ ನಿಂತಿರುವ ಒಂದು ಚಿತ್ರವೆಂದರೆ, ಪ್ರಾಯಶಃ ಆ ‘ನಮ್ಮ’ ಸ್ವಾಮಿಜೀಯವರೊಬ್ಬರದೇ ! ಇನ್ನು, ಸ್ವಲ್ಪ ದೀರ್ಘಕಾಲ ಉಳಿದಿಕೊಂಡವರಲ್ಲಂತೂ ಕಂಡುಬರುವುದು ಸ್ವಾಮಿಜೀಯವರೊಂದಿಗೆ ಏಕಪ್ರಕಾರವಾದ ಗಾಢ ಭಾವನಾತ್ಮಕ ಸಂಬಂಧ. ಇವರಲ್ಲನೇಕರು ಯಾವಾಗಲಾದರೂ ಆಶ್ರಮಬಂಧುಗಳಿಗೆ ಪರಸ್ಪರ ಸಿಗುವುದುಂಟು. ತಾವು ಇಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡರೆ, ಆಶ್ರಮ-ಬಾಲಕಸಂಘಗಳ ಕುರಿತಂತೆ ಅವರಿಗೆ ಹೇಳಲು ಬೇರೇನೂ ಇಲ್ಲದಿರಬಹುದು. ಆದರೆ ಆ ಮಾತುಕತೆಗಳ ಕೇಂದ್ರಬಿಂದು ಮಾತ್ರ ‘ಸ್ವಾಮೀಜಿ’. ಇನ್ನೂ ಹೇಳಬೇಕೆಂದರೆ, ಹೆಚ್ಚಿನವರ ಮಟ್ಟಿಗೆ ಸಂಘ-ಸ್ವಾಮೀಜಿ ಬೇರೆಯೇ ಅಲ್ಲ! ಸ್ವಾಮೀಜಿಯವರ ಬಗ್ಗೆ ಇವರೆಲ್ಲರ ಬಾಯಲ್ಲೂ ಕೇಳಿಬರುವುದು ಪೂಜ್ಯತೆ, ಗೌರವ, ಆದರ, ಪ್ರೇಮ, ಅಭಿಮಾನದ ಮಾತುಗಳೇ ಎನ್ನುವುದು ಎನ್ನುವುದೊಂದು ಆಶ್ಚರ್ಯಕರವಾದ, ಗಮನಾರ್ಹ ಸತ್ಯ. ಭಾವುಕತೆಯಾಗಲಿ ನಯ-ಸೌಮ್ಯತೆಗಳಾಗಲಿ ಇರುವಂತೆ ತೋರದ ಕೆಲವು ಯುವಕರು ಕೂಡ ಸ್ವಾಮಿಜಿಯವರ ಹೆಸರೆತ್ತಿ ಒಂದೆರಡು ಮಾತನಾಡಿದರೆ ಕಣ್ಣಂಚಿನಲ್ಲಿ ನೀರುಕ್ಕಿಸುವರಲ್ಲ!

‘ಇದರಲ್ಲಿ ಆಶ್ಚರ್ಯವೇನು? ಭಕ್ತವೃಂದದಲ್ಲಿ ಅಂಥವರಿಗೇನು ಕೊರತೆಯೇ?’ ಎಂದು ಕೇಳಬಹುದು. ಆದರೆ ವಿಷಯ ಅಷ್ಟು ಸರಳವಲ್ಲ.

ಆದರ್ಶಬೋಧನೆ-ಸುಲಭವಲ್ಲ! ಭಕ್ತರಾಗಿ ಬಂದವರು ಭಕ್ತರಾಗಿ ಬೆಳೆಯುವುದು ಸುಲಭ, ಸಹಜ. ಆದರೆ ಬಾಲಕರಾಗಿ ಬಂದವರು ಪ್ರೌಢಭಕ್ತರಾಗಿ ಬೆಳೆದರೆ, ನಿಷ್ಠಾವಂತ ಅನುಯಾಯಿಗಳಾಗಿ ಉಳಿದರೆ ಗಮನಾರ್ಹ ಸಂಗತಿ. ಸಾಮಾನ್ಯವಾಗಿ, ದೊಡ್ಡ ವ್ಯಕ್ತಿಯೊಬ್ಬರ ಸಂಪರ್ಕಕ್ಕೆ ಬಂದವರು ಮೊದಲಿಗೆ ಅವರಿಂದ ತುಂಬಾ ಪ್ರಭಾವಿತರಾದರೂ ಅನಂತರ ಆ ಆದರ – ಗೌರವಗಳು ಕಾಲಕ್ರಮೇಣ ಮಾಸಿ ಅಸಡ್ಡೆ-ತಿರಸ್ಕಾರಗಳಿಗೆ ಎಡೆಮಾಡುವುದನ್ನು ಬಹಳವಾಗಿ ಕಾಣುತ್ತೇವೆ. ಇದಕ್ಕೆ ಕಾರಣವಾದ ದೋಷ ಆ ಇಬ್ಬರು ವ್ಯಕ್ತಿಗಳಲ್ಲೂ ಇರಬಹುದು. ಆದ್ದರಿಂದ ದೊಡ್ಡವರೆನ್ನಿಸಿಕೊಂಡವರು ಪ್ರತಿದಿನವೂ ಎಲ್ಲರೊಂದಿಗೆ ಬೆರೆಯುತ್ತಿದ್ದರೆ, ವರ್ಷಗಟ್ಟಲೆ ಆ ಬಗೆಯ ಗೌರವವನ್ನು ಉಳಿಸಿಕೊಳ್ಳುವುದು ಕಷ್ಟ. ಹಾಗೆ ಉಳಿಸಿಕೊಂಡವರಿದ್ದರೆ, ಅವರು ಅತ್ಯಂತ ಸತ್ವಯುತರೆಂದೇ ಅರ್ಥ. ಇದಲ್ಲದೆ, ಶಿಸ್ತು-ಸಂಯಮ-ಮೌಲ್ಯಗಳನ್ನು ಎತ್ತಿಹಿಡಿಯುವ ಸಂಘವೆಂದ ಮೇಲೆ ಸದಸ್ಯರಿಗೂ ಹಿರಿಯರಿಗೂ ಘರ್ಷಣೆ ಇದ್ದದ್ದೇ! ಹಾಗೆ ಶಿಕ್ಷೆ-ಶಿಕ್ಷಣಗಳಿಗೆ ಒಳಗಾದ ಕಿರಿಯರು ಹಿರಿಯರ/ನಿರ್ದೇಶಕರ ಸದುದ್ದೇಶವನ್ನೂ ನಿಷ್ಪಕ್ಷಪಾತತೆಯನ್ನೂ ಒಪ್ಪದೇ, ಅಪವಾದ ಹೊರಿಸುತ್ತಾರೆ, ದೂರವಾಗುತ್ತಾರೆ. ಅಲ್ಲದೆ ಎಳೆಯರೆಂದರೆ ಬಂಡಾಯ ಪ್ರವೃತ್ತಿಯವರು; ತಮಗೆ ಆದರ್ಶಗಳನ್ನು ಬೋಧಿಸುವವರು ತಾವು ಹೇಗೆ ಬದುಕುತ್ತಿದ್ದಾರೆ ಎಂದು ದುರುಗುಟ್ಟಿ ನೋಡುತ್ತಿರುವುದೇ ಅವರ ಸ್ವಭಾವ. ಧಾರ್ಮಿಕ ಸಂಸ್ಥೆಗಳ ವಿದ್ಯಾರ್ಥಿನಿಲಯಗಳಲ್ಲಿದ್ದು ಬಂದವರನ್ನೊಮ್ಮೆ ಮಾತನಾಡಿಸಿದರೆ ತಿಳಿಯುತ್ತದೆ – ಆ ತರುಣರಲ್ಲಿ ಹೆಚ್ಚಿನವರು ಸಾಧುಗಳಿಂದ ಪ್ರಭಾವಿತರಾಗುವುದಿರಲಿ, ಅವರ ಬಗ್ಗೆ ಕೋಪ-ತಿರಸ್ಕಾರಗಳಿಂದಲೇ ಮಾತನಾಡುತ್ತಾರೆ! ‘ದೀಪದ ಕೆಳಗೆ ಕತ್ತಲೆ’ ಎನ್ನುತ್ತಾ ದೊಡ್ಡವರ ಸಣ್ಣತನದ ವಿಮರ್ಶೆಯಲ್ಲಿ ತೊಡಗುತ್ತಾರೆ.

ಇಂಥ ಆರೋಪಗಳಲ್ಲಿ ಯಾವಾಗಲೂ ಸತ್ಯಾಂಶವಿರುತ್ತದೆ ಎಂದೇನೂ ಇಲ್ಲಿ ಸೂಚಿಸುತ್ತಿಲ್ಲ. ಎಷ್ಟೇ ಒಳಿತಿರುವಲ್ಲಿಯೂ ಕೆಡುಕನ್ನೇ ಕಾಣುವ ದುರ್ಭಾಗ್ಯರು ಎಲ್ಲಿ ಬೇಕಾದರೂ ಇರಬಹುದು. ಆದರೆ, ನಮ್ಮ ಬಾಲಕಸಂಘ-ಯುವಕಸಂಘಗಳಲ್ಲಿದ್ದವರು ಸ್ವಾಮೀಜಿಯವರ ಹಾಗೂ ಸಂಸ್ಥೆಯ ಬಗ್ಗೆ ಭಕ್ತಿ-ನಿಷ್ಠೆಗಳಿಂದಿರುವುದು, ಮಾತ್ರವಲ್ಲ ಸಾಧುತ್ವ-ಸಜ್ಜನಿಕೆಗಳಲ್ಲಿ ವಿಶ್ವಾಸವಿರಿಸಿರುವುದರ ಬಗ್ಗೆ ಕಂಡುಬಂದರೆ ಅದು ಆಕಸ್ಮಿಕವಲ್ಲ.

ಬಾಲಕರಿಂದ ಆ ಬಗೆಯ ಶಾಶ್ವತ ಪ್ರೀತಿ, ವಿಶ್ವಾಸಗಳನ್ನು ಗೆಲ್ಲಲು ಸ್ವಾಮೀಜಿಯವರು ಮಾಡಿದ್ದಾದರೂ ಏನು?

‘ಶೀಲನಿರ್ಮಾಣದಲ್ಲೊಂದು ಪ್ರಯೋಗ’ – ಇದು ಈ ‘ವಿವೇಕಾನಂದ ಬಾಲಕ ಸಂಘ’ದ ವ್ಯಾಖ್ಯೆ. ಈ ಸಂಸ್ಥೆಯ ಒಂದು ಸ್ಥೂಲ ಪರಿಚಯ ಕೊಡುವುದಾದರೆ, ಶಾಲಾವಯಸ್ಕರಾದ ಗಂಡುಮಕ್ಕಳ ಶೀಲನಿರ್ಮಾಣ ಇದರ ಗುರಿ; ನಾನಾ ಚಟುವಟಿಕೆಗಳ ಮೂಲಕ ಅವರ ಶಾರೀರಿಕ, ಬೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ ಎಂಬ ಚತುರ್ಮುಖಗಳ ಅಭಿವೃದ್ಧಿಯೇ ಇದರ ಆದರ್ಶ. ರಾಮಕೃಷ್ಣ ಮಹಾಸಂಸ್ಥೆಯ ಉಪಾಧ್ಯಕ್ಷರೂ ಅತಿವರ್ಚಸ್ವಿಗಳೂ ಆಗಿದ್ದ ಪೂಜ್ಯ ಸ್ವಾಮೀ ಯತೀಶ್ವರಾನಂದಜೀ ಮಹಾರಾಜರಿಂದ ೧೯೫೨ರಲ್ಲಿ ಆರಂಭಗೊಂಡಿತು. ಮೊದಲ ಸುಮಾರು ಹತ್ತು ವರ್ಷ ಮೂರ್ನಾಲ್ಕು ವಿವಿಧ ಸಾಧುಗಳ ನೇತೃತ್ವದಲ್ಲಿ ನಡೆದ ಇದು, ಸ್ವಾಮೀ ಪುರುಷೋತ್ತಮಾನಂದಜೀಯವರು ಬ್ರಹ್ಮಚಾರಿಯಾಗಿ ಸೇರಿದ ಮೇಲೆ ಕೆಲಕಾಲದಲ್ಲೇ ಅವರ ಸುಪರ್ದಿಗೆ ಬಂತು. ೧೯೯೨ರಲ್ಲಿ ತಾವು ಪೊನ್ನಂಪೇಟೆಯ ಆಶ್ರಮಕ್ಕೆ ವರ್ಗವಾಗಿ ಹೋಗುವವರೆಗೂ, ಎಂದರೆ ಹೆಚ್ಚುಕಡಿಮೆ ಮೂವತ್ತು ವರ್ಷಗಳಷ್ಟು ದೀರ್ಘಕಾಲ, ಅವರೇ ಅವಿರತವಾಗಿ ಅದರ ನಿರ್ದೇಶಕ-ನಿರ್ವಾಹಕರಾಗಿದ್ದರು. ಇಂದಿಗೂ ಈ ಸಂಸ್ಥೆ ರಾಮಕೃಷ್ಣ ಮಠದ ಆವರಣದಲ್ಲಿ, ಅಲ್ಲಿನ ಸಾಧು-ಬ್ರಹ್ಮಚಾರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.

ಕಳೆದ ಎರಡು-ಮೂರು ದಶಕಗಲ್ಲಿ ನಮ್ಮ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಎಷ್ಟೋ ಮಾರ್ಪಾಡುಗಳಾಗಿವೆ ಇದು ಎಲ್ಲರಿಗೂ ತಿಳಿದ ವಿಷಯವೇ. ಅದಕ್ಕೆ ತಕ್ಕಂತೆ ಬಾಲಕರ ಅಗತ್ಯ-ಸಾಧ್ಯತೆಗಳಲ್ಲೂ ಬದಲಾವಣೆಗಳಾಗುತ್ತ, ಮೊದಲಿನಿಂದಲೂ ಈ ಸಂಘದ ಚಟುವಟಿಕೆಗಳ ಸ್ವರೂಪವೂ ಆಗಾಗ್ಗೆ ಬದಲಾಗುತ್ತ ಬಂದಿದೆ. ಹಿಂದೆ ಪ್ರತಿದಿನವೂ ತಪ್ಪದೆ ಬರುತ್ತಿದ್ದ ಬಾಲಕರ ಸಂಖ್ಯೆ ಸಾಕಷ್ಟಿದ್ದು, ಅವರಿಗಾಗಿ ಅತ್ಯಂತ ಸಕ್ರಿಯವಾದ ‘ನಿತ್ಯದ ವಿಭಾಗ’ವೊಂದಿತ್ತು; ಭಾನುವಾರಗಳಂದು ಮಾತ್ರವೇ ಬರಲು ಸಾಧ್ಯವಿದ್ದವರಿಗೆ ಪ್ರತ್ಯೇಕ ವಿಭಾಗವೂ ಇತ್ತು. ಆದರೆ ಸುಮಾರು ೧೯೯೦ರಿಂದೀಚೆಗೆ ನಿತ್ಯದ ನಿರ್ದಿಷ್ಟ ಕಾರ್ಯಕ್ರಮಗಳು ನಿಂತು, ಕ್ರಮೇಣ ಪ್ರಮುಖ ಚಟುವಟಿಕೆಗಳೆಲ್ಲವೂ ಭಾನುವಾರಕ್ಕೆ ಸೀಮಿತವಾದವು.

ನಾನು ಇಲ್ಲಿ ಹೇಳ ಹೊರಟಿರುವ ವಿಷಯಗಳಿಗೆ ಆಧಾರವೆಂದರೆ, ೧೯೭೧-೯೨ ರ ಅವಧಿಯಲ್ಲಿ ನಾನು ಸಕ್ರಿಯ ಸದಸ್ಯನಾಗಿದ್ದಾಗ ನನಗೆಟುಕಿದ ಸೀಮಿತ ಅನುಭವಗಳು ಮಾತ್ರವೇ. ಆ ವರ್ಷಗಳಲ್ಲಿ ಸಂಘದ ಸ್ವರೂಪ ಹೇಗೆ ಬದಲಾಯಿತು, ಚಟುವಟಿಕೆಗಳ ವೈವಿಧ್ಯ ಮತ್ತು ತೀವ್ರತೆ ಹೇಗೆ ಹೆಚ್ಚಿತು, ಸದಸ್ಯರ ಸಂಖ್ಯೆಯೂ ಸೇರಿದಂತೆ ಅನೇಕ ವಿಚಾರಗಳಲ್ಲಿ ಹೇಗೆ ಪ್ರಗತಿಯಾಯಿತು ಎಂಬುದರ ಆಧಾರದಲ್ಲಿ ಹೇಳುವುದಾದರೆ, ಅದೊಂದು ಸ್ವರ್ಣಯುಗವೇ ಸರಿ! ಈ ಸಂಘದ ಕುರಿತಾದ ತಮ್ಮ ಉದಾತ್ತಕಲ್ಪನೆಗಳನ್ನು, ಅದರ ಆದರ್ಶಗಳನ್ನು ಅದರ ಸಂಸ್ಥಾಪಕರೇ ಸೂತ್ರರೂಪದಲ್ಲಿ ಬರೆದಿಟ್ಟಿದ್ದರು; ಅದಕ್ಕೆ ಬೇಕಾದ ಮೇಲ್ಪಂಕ್ತಿಗಳನ್ನು ತಮ್ಮ ಜೀವನದಲ್ಲಿ ಹಾಕಿಕೊಟ್ಟಿದ್ದರು. ಆದರೆ ವಾಸ್ತವಜಗತ್ತಿನಲ್ಲಿ ಆ ಆದರ್ಶಗಳನ್ನು ಎತ್ತಿಹಿಡಿಯುವಂತೆ ಇಂಥ ಸ್ವಯಂಸೇವಾಸಂಸ್ಥೆಯೊಂದನ್ನು ನಡೆಸಿಕೊಂಡು ಬರುವ ಜವಾಬ್ದಾರಿ ಮಾತ್ರ ಕಡುಕಷ್ಟಕರ! ಕಡುಕಷ್ಟಕರ! ಇದನ್ನು ಅರಿತಿದ್ದ ರಾಮಕೃಷ್ಣ ಮಹಾಸಂಘದ ಎಲ್ಲ ಹಿರಿ-ಕಿರಿಯ ಸಾಧುಗಳೂ ಮೆಚ್ಚಿ, ಅವರನ್ನು ಮುಕ್ತವಾಗಿ ಶ್ಲಾಘಿಸುವಂತೆ ದೀರ್ಘಕಾಲ ಈ ಸಂಸ್ಥೆಯನ್ನು ಸಲಹಿ ಉಳಿಸಿ, ಕಲ್ಪನೆಗೂ ಮೀರಿ ಬೆಳೆಸಿ ಪ್ರವರ್ಧಮಾನಕ್ಕೆ ತಂದವರು ಸ್ವಾಮೀಜಿ. ಅದನ್ನು ಯಾವ ಬಗೆಯಲ್ಲಿ ಸಾಧಿಸಿದರು ಎನ್ನುವ ವಿವರಗಳು ಸಾಂಸ್ಥಿಕ ನಿರ್ವಹಣೆ, ಮಾನವಸಂಪನ್ಮೂಲ, ಮನೋವಿಜ್ಞಾನ, ಧರ್ಮಸೂಕ್ಷ್ಮ, ಯೋಜನೆ, ಚಾಣಾಕ್ಷತನ, ಮುಂತಾದ ಶಾಸ್ತ್ರಗಳಲ್ಲಿ ಹತ್ತು-ಹಲವಾರು ಪ್ರೌಢಪ್ರಬಂಧಗಳಿಗೆ ಆಕರವಾಗಬಲ್ಲವು! ಈ ಮಾತಿಗೆ, ಆ ನೂರಾರು ಮುಖಗಳನ್ನು ಸಮೀಪದಿಂದ ಕಂಡಿದ್ದ ಸಂಘದ ಹಿರಿಯ ಸದಸ್ಯರೆಲ್ಲರೂ ಸಾಕ್ಷಿಗಳು. ಅವರೆಲ್ಲರೂ ಈ ಲೇಖನಕ್ಕೆ ಪೂರಕವಾಗಿ ಎಷ್ಟೆಷ್ಟೋ ವಿಚಾರಗಳನ್ನು ಹೇಳಬಲ್ಲರು; ಹೇಳಲು ಮುಂದಾಗಲಿ ಎನ್ನುವುದು ನನ್ನ ಬಯಕೆ ಕೂಡ!

ಇತರರ ವಿಷಯ ಹಾಗಿರಲಿ; ಈ ಬಗೆಯ ಸಂಘವೊಂದನ್ನು ನಿರ್ವಹಿಸುವ ವಿಷಯದಲ್ಲಿ ಸ್ವಾಮೀ ಪುರುಷೋತ್ತಮಾನಂದಜೀಯವರೇ ಬರೆದ ‘ಬಾಲಕಸಂಘ: ಒಂದು ವಿಶಿಷ್ಟ ಪ್ರಯೋಗ’ ಎಂಬ ಪುಸ್ತಕವೊಂದಿದೆ (ಪ್ರಕಟಣೆ: ರಾಮಕೃಷ್ಣ ಮಠ, ಬೆಂಗಳೂರು, ೧೯೮೭? ಬೆಲೆ:… ‘ವಿವೇಕಹಂಸ’ ಗ್ರಂಥಭಂಡಾರದಲ್ಲೂ ಲಭ್ಯ. ದಯವಿಟ್ಟು ಒಮ್ಮೆ ಓದಿ). ಅದರಲ್ಲಿ ಇಂಥ ಸಂಘದ ರಚನೆ, ನಿರ್ವಹಣೆ, ಚಟುವಟಿಕೆಗಳು, ಸಮಸ್ಯೆಗಳು, ಪರಿಹಾರಗಳು ಮುಂತಾದುವನ್ನೆಲ್ಲ ತಾತ್ವಿಕವಾಗಿಯೂ ಪ್ರಾಯೋಗಿಕವಾಗಿಯೂ ಚರ್ಚಿಸಲಾಗಿದೆ. ಇದರಲ್ಲಿ ಎಲ್ಲಕ್ಕಿಂತ ಮುಖ್ಯವಾದ ಭಾಗವೆಂದರೆ ಸಂಘದ ನಿರ್ವಾಹಕರ ಗುಣವಿಮರ್ಶೆ. ಇಡೀ ಸಂಘದ ಅಸ್ತಿತ್ವ, ಗುಣಮಟ್ಟ, ಪ್ರಗತಿ, ಭವಿಷ್ಯಗಳು ಸಂಚಾಲಕರೊಬ್ಬರ ಶೀಲ-ಗುಣಗಳನ್ನೇ ಅವಲಂಬಿಸಿಕೊಂಡಿದೆ ಎನ್ನುವ ಮಾತನ್ನು ಅದರಲ್ಲಿ ಲೇಖಕರು ಒತ್ತಿಹೇಳಿರುವುದು ಅತ್ಯಂತ ಸೂಕ್ತವಾಗಿದೆ. ಸ್ವಯಂ ಪೂಜ್ಯ ಸ್ವಾಮೀಜಿಯವರ ಕಾರ್ಯವಿಧಾನವನ್ನು ಕಂಡಿದ್ದವರಿಗೆ ಅವರು ತಾವು ಸಾಧಿಸಿದ್ದುದರಲ್ಲಿ ಕಿಂಚಿತ್ ಭಾಗವನ್ನಷ್ಟೇ ಇಲ್ಲಿ ಬರೆದಿದ್ದಾರೆ ಎನ್ನುವುದು ಗೋಚರಿಸುತ್ತದೆ.

ಎಂದರೆ, ಸಂಘಜೀವನದ ಅತ್ಯುನ್ನತ ಆದರ್ಶಗಳನ್ನು ಪ್ರತಿಕ್ಷಣವೂ ಆಚರಿಸುವುದು ಹೇಗೆ ಎಂಬುದರ ಜೀವಂತ ಭಾಷ್ಯವೇ ಸ್ವಾಮೀಜಿಯವರಲ್ಲಿ ಕಾಣುತ್ತಿತ್ತು. ನಿಜಕ್ಕೂ ಇಂಥ ಸಂಘದ ನಿರ್ವಹಣಿಯೊಂದು ‘ಅಸಿಧಾರಾವ್ರತ’-ಕತ್ತಿಯಲಗಿನ ಮೇಲೆ ನಡೆಯುವಷ್ಟು ಕಷ್ಟದ ಕೆಲಸ. ಯಶಸ್ವೀ ಸಂಚಾಲಕರೊಬ್ಬರಿಗೆ ಅತ್ಯವಶ್ಯವಾದ ಗುಣಗಳು ಒಂದೆರಡಲ್ಲ. ಆತ್ಮನಿಗ್ರಹ-ಸ್ವಯಂಶಿಸ್ತು, ಮಾನವಪ್ರೇಮ, ಬುದ್ಧಿಮತ್ತೆ, ವಾಕ್ಶಕ್ತಿ, ಗ್ರಹಣಶಕ್ತಿ, ವಿಚಾರಶಕ್ತಿ, ಚಾತುರ್ಯ, ದೂರದೃಷ್ಟಿ, ನಿಃಸ್ಪೃಹತೆ, ನಿರ್ಮಾತ್ಸರ್ಯ, ಗುಣಗ್ರಾಹಿತ್ವ, ಸಮಾನದೃಷ್ಟಿ, ದಯೆ, ಕ್ಷಮೆ, ಹಾಗೆಯೇ ಕುಟಿಲತೆಯನ್ನು ಅರಿಯುವ ಶಕ್ತಿ, ದೃಢತೆ, ಅವಶ್ಯವಾದಾಗ ‘ದಂಡ’ನಾಯಕತ್ವ, ಎಲ್ಲಕ್ಕಿಂತ ಮಿಗಿಲಾಗಿ ವಿವೇಕ-ವೈರಾಗ್ಯಪೂರ್ಣವಾದ ಆಧ್ಯಾತ್ಮಿಕತೆ ಇವೆಲ್ಲ ಅವರಲ್ಲಿ ಇರಬೇಕಾಗುತ್ತದೆ. ಇದಲ್ಲದೆ ಹಸನ್ಮುಖತೆ, ಪ್ರಸನ್ನತೆ, ಹಾಸ್ಯಪ್ರಜ್ಞೆ, ಕಲಾವಂತಿಕೆ ಮುಂತಾದ ಸದ್ಗುಣಗಳೂ ಇದ್ದರೆ ಅತ್ಯುಪಯುಕ್ತ.

ಈ ಎಲ್ಲ ಗುಣಗಳೂ ಪೂಜ್ಯ ಸ್ವಾಮೀಜಿಯವರಲ್ಲಿ ಮೊದಲೇ ಬೀಜರೂಪದಲ್ಲಿದ್ದು, ಕ್ರಮೇಣ ಸಂಘದೊಂದಿಗೇ ಅವೂ ಬೆಳೆಯುತ್ತ ಬಂದಿದ್ದವು, ಮತ್ತು ಹೆಚ್ಚೆಚ್ಚು ವ್ಯಕ್ತವಾದವು ಎನ್ನುವುದು ನನ್ನ ಅನಿಸಿಕೆ. ಯಾವಯಾವ ಸಂದರ್ಭದಲ್ಲಿ ತಾವು ಅವರಲ್ಲಿ ಆ ಗುಣಗಳನ್ನು ಹೇಗೆ ಗುರುತಿಸಿದೆವು ಎಂದು ನೂರಾರು ಬಾಲಕರು ನೂರಾರು ವಿಧದಲ್ಲಿ ಹೇಳಬಲ್ಲರು. ಆದರೆ ಅವುಗಳಲ್ಲಿ ಯಾವುದೊಂದು ಇಲ್ಲದಿದ್ದರೂ ಸ್ವಾಮೀಜಿಯವರು ಅಷ್ಟೊಂದು ಯಶಸ್ವಿಗಳಾಗುತ್ತಿರಲಿಲ್ಲ, ಬಾಲಕ-ಯುವಕರ ಪಾಲಿಗೆ ಚಿರಸ್ಮರಣೀಯರೆನಿಸುತ್ತಿರಲಿಲ್ಲ – ಇದು ನಿಶ್ಚಿತ.

ಸಂಘನಾಯಕರಾಗಿ ಅವರಲ್ಲಿ ನಾನು ಕಂಡ ಗುಣವಿಶೇಷಗಳಲ್ಲಿ ಒಂದನ್ನಷ್ಟೇ ಇಲ್ಲಿ ಸಂಕ್ಷಿಪ್ತವಾಗಿ ಹೇಳಿ ಮುಕ್ತಾಯಗೊಳಿಸುತ್ತೇನೆ.

ಬಾಲಕರ ಪಾಲಿನ ಪ್ರೇಮಮೂರ್ತಿ: ಸ್ವಾಮೀಜಿಯವರ ಬೇರೆಲ್ಲ ಗುಣಾವಗುಣಗಳು (ಈ ಪದಪ್ರಯೋಗಕ್ಕೆ ಕ್ಷಮೆ ಇರಲಿ!) ಏನೇ ಇದ್ದಿರಲಿ, ಸಂಘವನ್ನು ಒಟ್ಟಾಗಿ ಹಿಡಿದಿಡುವಲ್ಲಿ, ಬಾಲಕರನ್ನು ಸಂಘಕ್ಕೂ ಮಾತೃಸಂಸ್ಥೆಯಾದ ಆಶ್ರಮಕ್ಕೂ, ತನ್ಮೂಲಕ ಶ್ರೀರಾಮಕೃಷ್ಣರ ಚರಣಗಳಿಗೂ ಬಂಧಿಸುವಲ್ಲಿ ಅತಿ ಮುಖ್ಯ ಪಾತ್ರ ವಹಿಸಿದ ಅಂಶವೆಂದರೆ, ಅವರು ಪ್ರತಿಯೊಬ್ಬನ ಮೇಲೂ ಮೊದಲ ನೋಟದಿಂದಲೇ ಹರಿಸುತ್ತಿದ್ದ ಅವ್ಯಾಜ ಪ್ರೀತಿಯೇ ಎನ್ನುವುದು ನನ್ನ ನಿಶ್ಚಿತ ಅಭಿಪ್ರಾಯ. ಪ್ರತಿಯೊಬ್ಬನಿಗೂ ಪ್ರತಿದಿನವೂ ಅವರು ನೀಡುತ್ತಿದ್ದ ನಗುಮೊಗದ ಸ್ವಾಗತ-ಬೀಳ್ಗೊಡುಗೆಗಳೇ ಸಾಕು! (‘ಇದ ನೆನೆದರೆ ಕಂಬನಿಯೇ…’ ಎನ್ನುವವರಿದ್ದಾರೆ!) ಪ್ರತಿಯೊಬ್ಬ ಬಾಲಕನ ವಿಷಯದಲ್ಲೂ ಗಮನ, ಎಚ್ಚರ; ಅವನ ಪಾಠ-ಪ್ರಗತಿ-ಊಟ-ಉಡುಗೆ-ನಿದ್ರೆಗಳೆಲ್ಲದರ ವಿಚಾರದಲ್ಲೂ ಕಾಳಜಿ! ಏಳನೇ ತರಗತಿಯ ಪೋರನನ್ನು ಕೂಡ ಅವರು ಮಾತನಾಡಿಸುವುದನ್ನು ನೋಡಬೇಕು – ಅವನೇನು ದೊಡ್ಡ ಪಂಡಿತನೋ, ಅವನಿಂದ ತಮಗೇನೋ ದೊಡ್ಡ ಉಪಕರವಾಗಬೇಕಾದ್ದು ಇದೆಯೋ ಎಂಬ ಧೋರಣೆ! ಅಲ್ಲದೆ ಒಮ್ಮೆ ಅವನ ವಿಚಾರಗಳನ್ನು ತಿಳಿದ ಮೇಲೆ ಅವರ ಮನಃಪಟಲದಲ್ಲಿ ಅವು ಎಂದೆಂದಿಗೂ ಸ್ಥಿರ! ಇನ್ನು ಅವರು ವಸ್ತು-ತಿನಿಸುಗಳ ರೂಪದಲ್ಲಿ ನೀಡುತ್ತಿದ್ದ ಬಹುಮಾನಗಳಿಗೆ, ಮಾತಿನಿಂದ ನೀಡುತ್ತಿದ್ದ ಪ್ರೋತ್ಸಾಹ, ಮೃದು-ಕಠಿಣ ಮಾತುಗಳಿಂದ ನೀಡುತ್ತಿದ್ದ ಬುದ್ಧಿವಾದ (ಇವೆಲ್ಲ ಪ್ರಯೋಜನಕ್ಕೆ ಬಾರದಿದ್ದಾಗ, ಅವರೇ ಹೇಳುತ್ತಿದ್ದಂತೆ ‘ಒಮ್ಮೆ ಚಾಟಿ ಬೀಸಿದರೆ ಮೂರು ಸುತ್ತು ಸುತ್ತಿಕೊಳ್ಳಬೇಕು’ ಎನ್ನುವಂಥ ಮಾತಿನ ಏಟು!) ಇವುಗಳಿಗೆಲ್ಲ ಲೆಕ್ಕವೇ ಇಲ್ಲ.

ಇಷ್ಟೆಲ್ಲಾ ಪ್ರೀತಿಗೆ ಪ್ರತಿಯಾಗಿ ಅವರಿಗೆ ಯಾರು ಏನನ್ನು ತಾನೇ ಕೊಡಲು ಸಾಧ್ಯವಿತ್ತು? ಈ ಹುಡುಗರು ಅನೇಕ ವರ್ಷ ಹೀಗೆಯೇ ಬಿಡದೆ ಬಂದು, ಬೆಳೆದು ಬುದ್ದಿ ಕಲಿತು ಸ್ವಾವಲಂಬಿಗಳಾದರೆ, ತಾವು ಪಡೆದ ಉಪಕಾರದ ಸ್ಮರಣೆಯಿನ್ನೂ ಇದ್ದರೆ, ಕೃತಜ್ಞತೆ ಎನ್ನುವುದನ್ನು ದೇವರೇನಾದರೂ ಕೊಟ್ಟಿದ್ದರೆ, ಮುಂದೆಂದಾದರೂ ಸಂಘಕ್ಕಾಗಿ, ಆಶ್ರಮಕ್ಕಾಗಿ ಏನಾದರೂ ಸೇವೆ ಸಲ್ಲಿಸಬಹುದಾಗಿತ್ತು! ಆದರೆ ಈ ನಿರೀಕ್ಷೆಯೂ ಸ್ವಾಮೀಜಿಯವರಿಗೇನೂ ಇರಲಿಲ್ಲ. ಏಕೆಂದರೆ, ಮೊದಲಿಗೆ ಸಂಘವನ್ನಾಗಲಿ ಅದರ ಸದಸ್ಯರನ್ನಾಗಲಿ ತಾವೇನೂ ಮನಸ್ಸಿಗೆ ಅಂಟಿಸಿಕೊಂಡಿಲ್ಲ; ಯಾವ ಕ್ಷಣದಲ್ಲಿ ಆಜ್ಞೆ ಬಂದರೆ ಆಗ ಅದನ್ನು “ಹೀಗೆ” ಒದರಿಕೊಳ್ಳಲು ತಾವು ಸಿದ್ಧ ಎಂದು (ತಮ್ಮ ಮೇಲುಹೊದಿಕೆಯನ್ನು ಕೊಡವಿ) ಆಗಾಗ ತೋರಿಸುತ್ತಲೇ ಇದ್ದರು, ಸ್ವಾಮೀಜಿ. ಈ ಬಗೆಯ ತೀವ್ರ ಪ್ರೀತಿ, ನಿರ್ಮಮತೆಗಳೇ, ಸಂಘಸೂತ್ರದಾರರಾಗಿ ಅವರ ಯಶಸ್ಸಿನ ದೊಡ್ಡ ಕಾರಣ ಎನ್ನುವುದು ನನ್ನ ಅನಿಸಿಕೆ.

ಸಂಘಸೂತ್ರಧಾರ ಸ್ವಾಮೀಜಿಯವರ ‘ಪಾತ್ರ’ದ ಬಗ್ಗೆ ಹೇಳಬಹುದಾದ ಇಂಥ ವಿಚಾರಗಳು ಇನ್ನೆಷ್ಟೋ! ಅವನ್ನು ಮುಂದೆ ಯಥಾಯೋಗ್ಯವಾಗಿ ವಿವೇಕಹಂಸದಲ್ಲಿ ಪ್ರಕಟಿಸಲಾಗುವುದು.


Add your articles

If you are interested to post your articles on our website, please send in your articles here. Also, send us a brief description about yourself to include in about author’s column.

[contact-form-7 404 "Not Found"]
ಸಂಘಸೂತ್ರದಾರಿ ಸ್ವಾಮೀಜಿ

Leave a Reply

Your email address will not be published. Required fields are marked *

Scroll to top