ಗುರುಕುಲದ ಹಿನ್ನಲೆ

ಹಿನ್ನೆಲೆ

ಭಾರತದ ಸಾಂಸ್ಕೃತಿಕ-ಧಾರ್ಮಿಕ ಪರಂಪರೆಯಲ್ಲಿ ಸಾಮೂಹಿಕ ಭಜನೆಗೆ ಮಹತ್ವದ ಸ್ಥಾನವಿದೆ. ಅದೊಂದು ಶ್ರೇಷ್ಠ ಆಧ್ಯಾತ್ಮಿಕ ಸಾಧನೆಯ ಮಾರ್ಗ ಎಂದು ಸಾಧುಸಂತರೆಲ್ಲ ಹೇಳುತ್ತಾರೆ; ಶಾಸ್ತ್ರಗಳೂ ಅದನ್ನು ಕೊಂಡಾಡಿವೆ. ಉತ್ತಮವಾದ ಭಜನೆಯಿಂದ ಆತ್ಮಕ್ಕೆ ದೊರೆಯುವ ಪುಷ್ಟಿ ಹಾಗಿರಲಿ; ಅದರಿಂದ ಈ ಕೂಡಲೇ ಅವರವರ ಮನಸ್ಸಿಗೆ ಸಿಗುವ ತುಷ್ಟಿಯಂತೂ ಸ್ವಯಂವೇದ್ಯ. ವರ್ಗ, ವಯಸ್ಸುಗಳ ಬೇಧವಿಲ್ಲದೆ ಎಲ್ಲ ಬಗೆಯ ಜನರಿಗೂ ಉಲ್ಲಾಸ ನೀಡುತ್ತ ಉನ್ನತ ಭಾವಕ್ಕೆ ಒಯ್ಯಬಲ್ಲ, ಅವರನ್ನು ಪರಸ್ಪರ ಒಂದುಗೂಡಿಸಬಲ್ಲ, ಅಪ್ಪೋರ್ವ ಶಕ್ತಿ ಇದಕ್ಕಿದೆ. ಆದರೆ ಸಂಗೀತದ ಶಿಸ್ತಿಗೆ ಒಳಪಟ್ಟ, ಸೌಮ್ಯಗುಣವುಳ್ಳ ಭಜನೆ ಅಪರೂಪವೇ.

ಇಂತಹ ಒಳ್ಳೆಯ ಭಜನೆಯಲ್ಲಿ ಭಾಗವಹಿಸಿ ಆನಂದಿಸಬಯಸುವವರಿಗೆ, ಸಾಮಾನ್ಯವಾಗಿ, ರಾಮಕೃಷ್ಣ ಆಶ್ರಮ-ಕೇಂದ್ರಗಳು ಓಯಸಿಸ್ ಗಳಿದ್ದಂತೆ. ಶ್ರೀ ರಾಮಕೃಷ್ಣ ಪರಂಪರೆಯಲ್ಲಿ ಭಕ್ತಿಸಂಗೀತದ ಪಾತ್ರ ವಿಶೇಷವಾದುದು. ಸ್ವಯಂ ಶ್ರೀ ರಾಮಕೃಷ್ಣರೂ ಸ್ವಾಮಿ ವಿವೇಕಾನಂದರೂ ತಮ್ಮ ಸ್ವಯಂಸ್ಫೂರ್ತ ಗಾಯನದಿಂದ ಕೇಳುಗರಲ್ಲಿ ಅಲೌಕಿಕ ಆನಂದವನ್ನು ಉಂಟುಮಾಡುತ್ತಿದ್ದ ವಿಚಾರ ಪ್ರಸಿದ್ಧವಾದದ್ದು. ಅವರಿಂದಲೇ ಆರಂಭವಾದ ಗಾನಸತ್ಸಂಸ್ಕೃತಿ ರಾಮಕೃಷ್ಣ ಮಹಾಸಂಸ್ಥೆಯ ಸಾಧುಗಳ ಮೂಲಕ ಮುಂದುವರಿದುಕೊಂಡು ಬಂದು ಸಮಸ್ತ ಸಮಾಜದ ಪಾಲಿನ ವರವಾಗಿ ಪರಿಣಮಿಸಿದೆ. ಈ ಕೇಂದ್ರಗಳಿಗೆ ಬರುವ ಹೆಚ್ಚಿನ ಜನರನ್ನು ಮೊದಲಿಗೆ ಆಕರ್ಷಿಸುವುದು ಅಲ್ಲಿನ ವಿಶಿಷ್ಟ ಭಜನೆಯೇ. ಹಿಂದೂಸ್ಥಾನಿ ಪದ್ದತಿಯ ಗಾಂಭೀರ್ಯವೂ ಬಂಗಾಳೀ ಸಂಪ್ರದಾಯದ ಮಾಧುರ್ಯವೂ ಬೆರೆತ, ಶ್ರುತಿ-ಲಯ-ರಾಗಬದ್ದವಾದ ಆಶ್ರಮಭಜನೆ ಒದಗಿಸುವ ಅನುಭವ ವಿಶಿಷ್ಟ. ಅದು ಭಾವಪ್ರಚೋದಕ. ಬೆಂಗಳೂರು ರಾಮಕೃಷ್ಣ ಮಠದ ವಿಚಾರದಲ್ಲಿ ಈ ಮಾತುಗಳು ಇನ್ನೂ ಹೆಚ್ಚು ಸತ್ಯ. ಉತ್ತಮ ಗಾಯನಶಕ್ತಿಯ ಅನೇಕ ಸಾಧು-ಬ್ರಹ್ಮಚಾರಿಗಳಿಂದಾಗಿ ಇಲ್ಲಿ ಕನಿಷ್ಠ ಐವತ್ತು ವರ್ಷಗಳಿಂದಲೂ ಒಳ್ಳೆಯ ಭಜನೆ ಕೇಳಿಬರುತ್ತಿದೆ.

ಇಂಥ ಆಶ್ರಮವಾಸಿಗಳ ಪೈಕಿ, ಭಕ್ತವೃಂದಕ್ಕೆ ಅವಿಸ್ಮರಣೀಯ ಭಜನಾನಂದವನ್ನು ನೀಡಿದವರೆಂದರೆ, ೧೯೬೦-೯೦ ರ ದಶಕಗಳಲ್ಲಿ ಇಲ್ಲಿ ಭಜನೆಯ ನೇತೃತ್ವ ವಹಿಸಿದ್ದ ಸ್ವಾಮಿ ಪುರುಷೋತ್ತಮಾನಂದಜೀ ಅವರು (ಮಹಾಸಮಾಧಿ: ೨೦೦೫). ದೈವದತ್ತ ಕಂಠಶ್ರೀಯೊಂದಿಗೆ ಸ್ಪುಟ ಉಚ್ಚಾರಣೆ, ಭಕ್ತಿಪ್ರಚೋದಕವಾದ ಹೃದಯಸ್ಪರ್ಶಿ ಗಾಯನ ಅವರದು. ಅದು ಅನನುಕರಣೀಯ! ಭಜನೆಯನ್ನು ಜನಪ್ರಿಯಗೊಳಿಸಲು ಅವರು ಮಾಡಿದ ಯಶಸ್ವೀ ಪ್ರಯತ್ನ-ಪ್ರಯೋಗಗಳು ಅನೇಕ. ಎಲ್ಲರೂ ಭಾಗವಹಿಸಲಾಗುವಂತೆ, ಸುಲಭಗ್ರಾಹ್ಯವಾದ ಹಾಡುಗಳನ್ನು ಆಯ್ದು, ಸರಳ ರಾಗಗಳನ್ನು ಹಾಕಿದುದು ಬಹಳ ಫಲಕಾರಿಯಾಯಿತು. ಅಲ್ಲದೆ, ಆಶ್ರಮಕ್ಕೆ ಬರುತ್ತಿದ್ದ “ವಿವೇಕಾನಂದ ಬಾಲಕ ಸಂಘ’ ಹಾಗೂ ‘ಯುವಕ ಸಂಘ’ಗಳ ಸದಸ್ಯರನ್ನು ನಾನಾ ವಿಧದಿಂದ ಉತ್ತೇಜಿಸಿ, ಹಿಡಿದಿಟ್ಟು, ಅವರಿಗೆ ಅವಿರತವಾಗಿ ತರಗತಿಗಳನ್ನು ನಡೆಸಿ ಭಜನಾಮಂಡಳಿಯನ್ನು ನಡೆಸಿಕೊಂಡು ಬಂದರು. (ಇದಕ್ಕೆ ಬೇಕಾದ ಪ್ರತಿಭೆ, ಸಂಪನ್ಮೂಲತೆ, ಪರಿಶ್ರಮ, ಸಹನೆ ಎಷ್ಟೆಂಬುದು, ಪ್ರಯತ್ನ ಮಾಡಿದವರಿಗೇ ಗೊತ್ತು!) ಎಲ್ಲ ಉತ್ಸವಗಳಲ್ಲೂ ಈ ಬಾಲಕ-ಯುವಕರ ಭಜನೆ ಕಳೆಗಟ್ಟಿಸುತ್ತಿತ್ತು.

‘ಗುರುಕುಲ’ ಮೂಲ

ಬಾಲ್ಯದಲ್ಲೇ ಬಾಲಕಸಂಘದ ಮೂಲಕ ಸ್ವಾಮಿ ಪುರುಷೋತ್ತಮಾನಂದಜೀಯವರ ನಿಕಟ ಸಂಪರ್ಕಕ್ಕೆ ಬಂದು ಅವರಿಂದ ಭಜನೆಯನ್ನು ಕಲಿತ ಭಾಗ್ಯಶಾಲಿಗಳಲ್ಲಿ ಎಚ್.ವಿ.ವಿಶ್ವನಾಥ್ ಅವರೊಬ್ಬರು. ತಾವು ಕಲಿತದ್ದನ್ನು ಉಳಿದವರಿಗೂ ಕಲಿಸುವ ಸಹಜ ಉತ್ಸಾಹ, ಪ್ರವೃತ್ತಿ ಇವರದು. (ಶಿಕ್ಷಣದಲ್ಲಿ ಇಂಜಿನಿಯರ್ ಆದರೂ, ಸ್ವಾಮಿ ಪುರುಷೋತ್ತಮಾನಂದಜೀಯವರ ಪ್ರೇರಣೆಯಿಂದ ಆಶ್ರಮದ ಗ್ರಂಥಪ್ರಕಾಶನ ಕ್ಷೇತ್ರದಲ್ಲಿ ಸ್ವಯಂಸೇವಕರಾಗಿ ಅದರಲ್ಲೇ ಪರಿಣತಿಗಳಿಸಿದರು) ಹೀಗೆ ಭಜನೆಯನ್ನು ಕಲಿಸುವುದರಲ್ಲಿ, ತಾವು ಗಳಿಸಿದ ಆ ಸಿಹಿಯನ್ನು ಮತ್ತೆ ಮತ್ತೆ ಸವಿಯುವ, ತಮ್ಮ ಕಲಿಕೆಯನ್ನು ವರ್ಧಿಸಿಕೊಳ್ಳುವ, ಮತ್ತು ಎಲ್ಲರೊಂದಿಗೆ ಕೂಡಿ ಹಾಡಿ ಸಂತೋಷಿಸುವ ದೊಡ್ಡ ಲಾಭವಿದೆ! ಆದರೆ ಈ ಭಜನೆ ಕಲಿಸುವ ಕೆಲಸವನ್ನು ತಾವು ಗಂಭೀರವಾಗಿ ಗಣಿಸಿದ್ದೇಕೆ ಎಂಬುದಕ್ಕೆ ವಿಶ್ವನಾಥ್ ಅವರು ಕೊಡುವ ವಿವರಣೆ ಇದು:

“ಸುಮಾರು ಇಪ್ಪತ್ತು ವರ್ಷಗಳ ಕಾಲ ಆಶ್ರಮದ ಆಶ್ರಯದಲ್ಲೇ ಇದ್ದು ನಾನು ನೋಡಿ-ಕೇಳಿ ಕಲಿತ ಸದ್ವಿಚಾರಗಳು ಅಪಾರ. ಪೂಜ್ಯ ಸ್ವಾಮೀಜಿಯವರ ಮೂಲಕ ಕಲಿತ ಭಜನೆ ಕೂಡ ಅದರಲ್ಲೊಂದು. ಸಮಾಜದಲ್ಲಿ ಇವನ್ನೆಲ್ಲ ಕಲಿಯಲು ಅತ್ಯಂತ ಕಾತರರೂ ಸತ್ಪಾತ್ರರೂ ಆದ ಅಸಂಖ್ಯ ಜನರಿದ್ದಾರೆ. ಆದರೆ ಅವನ್ನು ಕಲಿಯಲು ಇಂಥ ಸಂಸ್ಥೆಗಳ ಸಂಪರ್ಕ, ವ್ಯಕ್ತಿಗಳ ಸಾನ್ನಿಧ್ಯ ಅವರಿಗೆಲ್ಲ ಎಲ್ಲಿ ಸಿಗಬೇಕು? ಇದನ್ನು ಗಮನಿಸುತ್ತ ನನಗೆ ತೀವ್ರವಾಗಿ ಒಂದು ಭಾವನೆ ಬರುತ್ತಿತ್ತು: ‘ನಾವು ಕಲಿತದ್ದನ್ನು ಕೆಲಮಟ್ಟಿಗಾದರು ಇತರರಿಗೆ ತಿಳಿಸುವ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ. ಅದರಲ್ಲೇ ನಮ್ಮ ಕಲಿಕೆಯ ಸಾರ್ಥಕ್ಯ; ಹಾಗೆ ಮಾಡದಿರುವುದು ಲೋಪವೇ ಸರಿ.’ ಇದು ಸ್ವಾಮಿ ವಿವೇಕಾನಂದರು ಭೋದಿಸುವ ‘ಆತ್ಮನೋ ಮೋಕ್ಷಾರ್ಥಂ ಜಗದ್ದಿತಾಯ ಚ’ ಎಂಬ ಆದರ್ಶದ ಅನುಷ್ಠಾನಮಾರ್ಗವೂ ಹೌದು.

ಹೀಗೆ ಒಬ್ಬರಿಂದೊಬ್ಬರು ಕಲಿಯಬಹುದಾದ ವಿಚಾರಗಳೇನೋ ಬಹಳಷ್ಟು. ಆದರೆ ಗೊತ್ತಿರುವುದನ್ನೆಲ್ಲ ಹಾಗೆ ದಾಟಿಸಲಾಗುವುದಿಲ್ಲ. ಉದಾಹರಣೆಗೆ ಬೌದ್ಧಿಕ, ಆಧ್ಯಾತ್ಮಿಕ, ನೈತಿಕ ವಿಷಯಗಳನ್ನು ಕಲಿಸಲು ಬೇಕಾದ  ಅರ್ಹತೆ ಬಹಳ; ಒಂದು ಬುದ್ಧಿಮಾತನ್ನು ಹೇಳುವವರು ಅದರ ಹತ್ತರಷ್ಟನ್ನು ರೂಢಿಸಿಕೊಂಡಿರಬೇಕಾಗುತ್ತದೆ. ಹಾಗೆ ನೋಡಿದಾಗ ಭಜನೆಯಲ್ಲಿ ಎಷ್ಟೋ ಉನ್ನತ ಮೌಲ್ಯಗಳು ಅಡಗಿದ್ದರೂ, ಅದೊಂದು ಸ್ಥೂಲ, ‘ಲೌಕಿಕ’ ವಿದ್ಯೆ; ಅದನ್ನು ಕಲಿಸುವುದು ಸುಲಭವೇ. ಅಲ್ಲದೆ ಅದನ್ನು ಕಲಿಯುವ-ಕಲಿಸುವ ಕ್ರಿಯೆಯಲ್ಲಿ ಫಲವೂ ತತ್ ಕ್ಷಣವೇ ಸಿಕ್ಕಿಬಿಡುತ್ತದೆ. ಮತ್ತು ಹಾಗೆ ಪಡೆದ ಫಲವನ್ನು ಉಳಿಸಿಕೊಂಡರೆ ಅದು ಜೀವನದಾದ್ಯಂತ ನಮ್ಮ ಪಾಲಿನ ಆಸ್ತಿಯಾಗಿರುತ್ತದೆ. ಆದ್ದರಿಂದ, ಈ ಭಜನೆಯನ್ನಾದರೂ ಆಸಕ್ತರಿಗೆ ಚೆನ್ನಾಗಿ ಕಲಿಸೋಣ ಎಂದು ಯೋಚಿಸಿ ಈ ಕೆಲಸದಲ್ಲಿ ತೊಡಗಿದೆ.”

ಅವರ ಈ ಪ್ರವೃತ್ತಿಗೆ ಮೊದಲು ನೀರೆರೆದವರೆಂದರೆ, ಅವರ ಸಂಗಡಿಗರೇ ಆಗಿದ್ದ ಯುವಮಿತ್ರರು. ಇವರಲ್ಲನೇಕರು ಆಶ್ರಮದ ಭಜನೆಯ ಸಂಸ್ಕೃತಿಯನ್ನು ಸಮಾಜದಲ್ಲಿ ಪ್ರಸಾರ ಮಾಡುವ ಉದ್ದೇಶದಿಂದ ಸುಮಾರು ೧೯೯೦ರ ವೇಳೆಗೆ ಒಟ್ಟುಗೂಡಿದ್ದರು. ಇವರಿಗೆ ಭಜನೆ ಹೇಳಿಕೊಡುವ ಹಾಗೂ ಕಾರ್ಯಕ್ರಮಗಳ ನೇತೃತ್ವ ವಹಿಸುವ ಕೆಲಸವನ್ನು ವಿಶ್ವನಾಥ್ ಉತ್ಸಾಹದಿಂದ ಕೈಗೊಂಡರು; ಜೊತೆಗೇ ತಮ್ಮ ಪರಿಣತಿಯನ್ನೂ ಹೆಚ್ಚಿಸಿಕೊಂಡು ಬಂದರು. ಮುಂದೆ ಕೆಲ ತರುಣರು ವಿರಕ್ತಜೀವನವನ್ನು ಆಶ್ರಯಿಸಿ ರಾಮಕೃಷ್ಣ ಯೋಗಾಶ್ರಮವನ್ನು ನಿರ್ಮಿಸಿಕೊಂಡ ಮೇಲೆ ಅದರಲ್ಲೂ ಇವರು ಅನೇಕ ವರ್ಷ ಸಕ್ರಿಯವಾಗಿ ಭಾಗವಹಿಸಿದರು. ಹಾಗೆಯೇ, ಶಾರದಾ ಸೇವಾಶ್ರಮದ ಭಗಿನಿಯರೂ ಕೂಡ ಸುಮಾರು ಹತ್ತು ವರ್ಷಕಾಲ ವಿಶ್ವನಾಥ್ ಅವರಿಂದ ಭಜನೆಯ ಸೂಕ್ಷ್ಮತೆಗಳನ್ನು ಕಲಿತಿದ್ದಾರೆ.

೧೯೯೬ರ ವೇಳೆಗೆ ಎಂಟು-ಹತ್ತು ವಿದ್ಯಾರ್ಥಿಗಳಿಗೆ (ಹೆಚ್ಚಾಗಿ ಹೆಣ್ಣುಮಕ್ಕಳೇ) ಭಜನೆಯನ್ನು ಹೇಳಿಕೊಡಲಾರಂಭಿಸಿದ ವಿಶ್ವನಾಥರು, ಅವರನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನೂ ನಡೆಸತೊಡಗಿದರು. ಅವರ ಈ ಪ್ರಯತ್ನದ ಬಗ್ಗೆಯೂ ಅದರ ಗುಣಮಟ್ಟದ ಬಗ್ಗೆಯೂ ಹಿರಿಯರಿಂದ ಸಮ್ಮತಿ-ಪ್ರಶಂಸೆ ದೊರೆಯಿತು. ಮುಖ್ಯವಾಗಿ, ಕೈಗೊಂಡ ಯಾವುದೇ ಕಾರ್ಯವನ್ನು ಇನ್ನಷ್ಟು ಚೆನ್ನಾಗಿ, ತೀವ್ರವಾಗಿ ಮಾಡುವಂತೆ ಸ್ವಾಮಿ ಪುರುಷೋತ್ತಮಾನಂದಜೀಯವರ ಒತ್ತಾಯಪೂರ್ವಕವಾದ ಪ್ರಚೋದನೆಯಂತೂ ಇದ್ದೇ ಇತ್ತು! ಕ್ರಮೇಣ ಅನೇಕ ಪ್ರಮುಖ ವೇದಿಕೆಗಳಲ್ಲಿ (ಉದಾ: ಭಾರತೀಯ ವಿದ್ಯಾಭವನ) ಭಾಗವಹಿಸುವ ಅವಕಾಶ ದೊರೆತಾಗ, ಗುರುತಿಗಾಗಿ ಸಂಘಕ್ಕೊಂದು ಹೆಸರಿಡುವ ಅವಶ್ಯಕತೆ ಉಂಟಾಯಿತು. ಆಗ ಸಂಘದ ರೂಪ, ಉದ್ದೇಶ, ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಶ್ರೀಮಾತೆಯವರ ಹೆಸರಿನಲ್ಲಿ ಶಾರದಾ ಗುರುಕುಲ ಎಂದು ಕರೆಯಲಾಯಿತು. ಇದರ ತತ್ವದಂತೆ, ಇಲ್ಲಿನ ವಿದ್ಯಾರ್ಥಿಗಳಿಗೆ ಹೇಳಿಕೊಡುವ ವ್ಯಕ್ತಿ ಪ್ರಧಾನನಲ್ಲ; ಆತ (ಅಥವಾ ಆಕೆ) ತನಗೆ ಪರಂಪರಾಗತವಾಗಿ ಪ್ರಾಪ್ತವಾದ ವಿದ್ಯೆಯನ್ನು ಇತರರಿಗೆ ಯಥಾವತ್ತಾಗಿ ವಿತರಿಸುವ ಪ್ರಯತ್ನ ಮಾಡುವವನೇ ಹೊರತು, ತನ್ನದೇ ಆದದ್ದೇನನ್ನೂ ಹೇಳಿಕೊಡುವವನಲ್ಲ; ಮತ್ತು ಆ ವಿದ್ಯೆ ಮಹಾ ಗುರುಗಳಿಂದಲೇ ಬಂದದ್ದು ಎಂಬ ದೃಷ್ಟಿಯಿಂದಲೇ ಗುರುಕುಲ ಎಂಬ ಹೆಸರನ್ನು ಆರಿಸಲಾಯಿತು.

ಭಜನೆಯ ಆಯಾಮಗಳು

ಭಜನೆಯ ಗಾಯನದಲ್ಲಿ ಸಂಗೀತ ಜ್ಞಾನ ಪ್ರಧಾನವಾದದ್ದು, ಉತ್ತಮವಾದ ಭಜನೆ ಮಾಡಬಯಸುವವರಿಗೆ ಶ್ರುತಿ-ಲಯ-ವಾದ್ಯ-ವಾದನಗಳ ತಿಳಿವಳಿಕೆ ಮಾತ್ರವಲ್ಲದೆ ಶರೀರ-ಶಾರೀರಗಳಿಗೆ ಸಂಬಂಧಿಸಿದ ವಿಚಾರಗಳಾದ ಉಚ್ಚಾರಣೆ, ಉಸಿರಾಟಕ್ರಮ, ಸಾಹಿತ್ಯ, ಭಾಷಾವಿಚಾರಗಳು, ಶಬ್ದಾರ್ಥ, ಭಾವವೈವಿದ್ಯ, ಕಲಾತ್ಮಕತೆ ಇವುಗಳ ತಕ್ಕಮಟ್ಟಿನ ಅರಿವು ಇರಬೇಕಾಗುತ್ತದೆ. ಅದಕ್ಕೂ ಮುಖ್ಯವಾಗಿ, ಕಲಿಕೆಗೂ ಹಾಡುವುದಕ್ಕೂ ಬೇಕಾದ ಸಮಾಧಾನಸ್ಥಿತಿ, ಪ್ರಸನ್ನತೆ, ಸೌಮ್ಯತೆ, ವಿನಯ, ದೃಢತೆ, ಋಜುತ್ವ, ಪ್ರಯತ್ನಶೀಲತೆ ಮತ್ತಿತರ ಸ್ವಭಾವ – ಸಂಬಂಧಿತ ವಿಚಾರಗಳಲ್ಲಿ ಶಿಕ್ಷಣ ಬೇಕಾಗುತ್ತದೆ. ಇನ್ನು ಶ್ರದ್ದೆ-ದೈವಭಕ್ತಿಗಳಂತೂ ಅಂತರಂಗಕ್ಕೆ ಸಂಬಂಧಿಸಿದ, ಅವರವರೇ ಬೆಳೆಸಿಕೊಳ್ಳಬೇಕಾದ ವಿಚಾರ – ಇದೇ ಗಾಯನದ ಜೀವಾಳ! ಅಲ್ಲದೆ ಒಟ್ಟಾಗಿ ಸೇರಿ ಕಲಿಯುವಾಗ, ಹಾಡಲು ಕುಳಿತಾಗ ಪರಸ್ಪರರಲ್ಲಿ ಸ್ನೇಹಪೂರ್ಣ ಸದ್ಭಾವವಿದ್ದರಷ್ಟೇ  ಭಜನೆ ಅರ್ಥಪೂರ್ಣವೆನಿಸುತ್ತದೆ! ಸಂಘಜೀವನದ ಅನೇಕ ತೊಡಕುಗಳನ್ನು ನಿವಾರಿಸಿಕೊಳ್ಳುತ್ತ ಅದರ ಉತ್ತಮಾಂಶಗಳನ್ನಷ್ಟೇ ಹೀರುವ ಜಾಣ್ಮೆಯೂ ವಿದ್ಯಾರ್ಥಿಗಳಿಗೆ ಅವಶ್ಯ. ಈ ಎಲ್ಲ ಕ್ಷೇತ್ರಗಳಲ್ಲೂ ಆಯಾ ವ್ಯಕ್ತಿಯ ವಯಸ್ಸು-ಶಕ್ತಿ-ಸ್ವಭಾವ-ಮನೋಭಾವಗಳಿಗೆ ತಕ್ಕಂತೆ ಸೂಕ್ತ ತರಬೇತಿ, ಸ್ಪೂರ್ತಿ ನೀಡುತ್ತಾ ಅವರನ್ನು ಬೆಳೆಸುತ್ತಾ ಸಂಘಟಿಸುವ ಸವಾಲು ಗುರುಕುಲದ ಮುಂದಿದೆ.

ಧ್ಯೇಯ

ಈ ಹಿನ್ನಲೆಯಲ್ಲಿ ಶಾರದಾ ಗುರುಕುಲದ ಧ್ಯೇಯಗಳನ್ನು ಹೀಗೆ ಸೂತ್ರೀಕರಿಸಬಹುದು:

೧. ಅತ್ಯುತ್ತಮ ರೀತಿಯಲ್ಲಿ ರಾಮಕೃಷ್ಣ ಪರಂಪರೆಯ ಭಜನೆಯ ಕಲಿಕೆ, ಬೋಧನೆ, ಪ್ರಸಾರ.
೨. ತತ್ ಪ್ರಯತ್ನದಲ್ಲಿ ಶ್ರೇಷ್ಠ ವೈಯಕ್ತಿಕ ಹಾಗೂ ಸಾಂಘಿಕ ಜೀವನಮೌಲ್ಯಗಳ ಆಚರಣೆ; ಆತ್ಮಹಿತ – ಸರ್ವಜನಹಿತಗಳ ಸಾಧನೆ.
೩. ಈ ಎಲ್ಲ ವಿಚಾರಗಳಲ್ಲಿ ಮುಖ್ಯವಾಗಿ ಶ್ರೀ ಸ್ವಾಮಿ ಪುರುಷೋತ್ತಮಾನಂದಜೀಯವರು ಹಾಕಿಕೊಟ್ಟ ಮಾದರಿಯನ್ನು ಅಳವಡಿಸಿಕೊಂಡು ಮುಂದುವರಿಯುವುದು.

ಮಾರ್ಗ

ಸದ್ಯದಲ್ಲಿ ಶಾರದಾ ಗುರುಕುಲದ ಯೋಜನೆಗಳೆಂದರೆ

೧. ಎಲ್ಲ ಆಸಕ್ತರಿಗೆ ಸಾರ್ವಜನಿಕ ಹಾಗೂ ಖಾಸಗಿ ತರಗತಿಗಳನ್ನು ನಡೆಸುವುದು; ವಿಶೇಷವಾಗಿ ಹೆಣ್ಣುಮಕ್ಕಳನ್ನು ಸಂಘಟಿಸಿ, ಅವರಿಗೆ ಶಿಸ್ತುಬದ್ಧ ತರಬೇತಿ ಕೊಡುವುದು; ಭಜನೆಯ ಜೊತೆಯಲ್ಲೇ ಅವರಿಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಉನ್ನತ ವಿಚಾರಗಳ, ಮೌಲ್ಯಗಳ, ಕೃತಿಗಳ, ವ್ಯಕ್ತಿಗಳ ಪರಿಚಯ ಮಾಡಿಕೊಡುವುದು; ತನ್ಮೂಲಕ ಅವರ ವ್ಯಕ್ತಿತ್ವ ನಿರ್ಮಾಣಕ್ಕೆ, ಸದ್ಗುಣ ವಿಕಸನಕ್ಕೆ ಪ್ರಚೋದನೆ ನೀಡುವುದು.
(ಶಾಸ್ತ್ರೀಯ ಸಂಗೀತವನ್ನೂ ಸಹಾಯಕ ವಾದ್ಯಗಳನ್ನೂ ಕಲಿಯಲು ಕೂಡ ಈ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ; ಸ್ವತಃ ಭಜನೆಯ ಶಿಕ್ಷಕರಾಗುವಂತೆ, ಭಜನೆ ಕಾರ್ಯಕ್ರಮಗಳ ನೇತೃತ್ವ ವಹಿಸುವಂತೆ, ಶ್ರೀರಾಮಕೃಷ್ಣ ಸಾಹಿತ್ಯದ ಅಧ್ಯಯನ ಕೈಗೊಳ್ಳುವಂತೆ ಮತ್ತು ಇದನ್ನೊಂದು ಜೀವನಮಾರ್ಗವಾಗಿ ಸ್ವೀಕರಿಸುವಂತೆ ಪ್ರೇರಿಸುವ ಕಾರ್ಯವೂ ನಿರಂತರವಾಗಿ ಸಾಗುತ್ತದೆ.)
೨ . ನಾವಾಗಿಯೇ ಆಯೋಜಿಸಿ, ಮತ್ತು ಇತರ ವ್ಯಕ್ತಿಗಳ, ಸಂಘ-ಸಂಸ್ಥೆಗಳ ಆಹ್ವಾನದ ಮೇರೆಗೆ ಮನೆ-ಶಾಲಾ ಕಾಲೇಜು ಮುಂತಾದ ವಿವಿಧ ವೇದಿಕೆಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ನೀಡುವುದು, ಹಾಗೂ
೩. ಧ್ವನಿಮುದ್ರಿಕೆಗಳನ್ನು ಹೊರತರುವುದು.

ಸಧ್ಯಕ್ಕೆ ಈ ಗುರುಕುಲದ ಮೂಲಕ ಭಜನೆಯನ್ನು ಸಕ್ರಿಯವಾಗಿ ಕಲಿಸುತ್ತಿರುವವರು ಒಬ್ಬರೇ ಆದರೂ ನಿರ್ದೇಶಕರಿಗೆ ಬೆಂಬಲ-ಸಲಹೆ ನೀಡುತ್ತಾ ಹಿನ್ನೆಲೆಯಲ್ಲಿರುವ ಆತ್ಮೀಯರು ಅನೇಕರು. ಆಶ್ರಮದ ಸಾಧುಗಳ ಆಶೀರ್ವಾದಪೂರ್ವಕ ಪ್ರೋತ್ಸಾಹವಂತೂ ಇದ್ದೇ ಇದೆ. ಇದರ ಧ್ಯೇಯಾದರ್ಶಗಳನ್ನು ಒಪ್ಪಿ ಹೆಗಲುಗೊಡಲು ಮುಂದಾಗುವ ಎಲ್ಲರಿಗೂ ಆತ್ಮೀಯ ಸ್ವಾಗತ!

‘ಗುರುಕುಲ’ಕ್ಕೆ ಮಾರ್ಗದರ್ಶನ-ಸ್ಫೂರ್ತಿಗಳ ಮೂಲವಾಗಿದ್ದ ಸ್ವಾಮಿ ಪುರುಷೋತ್ತಮಾನಂದಜೀ ಅವರ ಆದೇಶದಂತೆ, ೨೦೧೮ ರವರೆಗೆ ಆಶ್ರಮದ ಹಾಡುಗಳ ಹತ್ತು ಧ್ವನಿಮುದ್ರಿಕೆಗಳನ್ನು (ಕ್ಯಾಸೆಟ್ / ಸಿ.ಡಿ / ಎಂಪಿ೩) ಹೊರತರಲಾಗಿದೆ. ಈಗಾಗಲೇ ಹೆಚ್ಚಿನ ತರಬೇತಿ ಪಡೆದಿರುವ ವಿದ್ಯಾರ್ಥಿನಿಯರಾದ ವಾಣಿಶ್ರೀ, ವಿಜಯಲಕ್ಷ್ಮೀ, ಅಪರ್ಣಾ, ಶ್ವೇತಾ, ಮತ್ತು ರಶ್ಮಿ ಇವರುಗಳು ಸಮರ್ಪಣಾಭಾವದಿಂದ ಹಾಡಿರುವ (ಕ್ರಮವಾಗಿ [೧] ಸಿರಿ ರಾಮಕೃಷ್ಣ, [೨] ನನ್ನ ಜನನಿ… [೩] ಗೀತಾಮೃತಮ್ (ಸಂಪೂರ್ಣ ಭಗವದ್ಗೀತಾ ಪಠಣ). [೪] ಲಲಿತಾ ಸಹಸ್ರನಾಮ, [೫] ಬಂದು ನಿಂದಿಹ ನೋಡಿ, [೬] ಮಧುರ ರಾಮನಾಮ, [೭] ಕೃಷ್ಣನ ನೆನೆದರೆ, [೮] ಮಧುರ ದೇವೀ ಸಂಕೀರ್ತನೆ, [೯] ಪ್ರೇಮರೂಪ ಶ್ರೀರಾಮಕೃಷ್ಣ) ಈ ಒಂಬತ್ತು, ಹಾಗೂ ನಿರ್ದೇಶಕ ಶ್ರೀ ವಿಶ್ವನಾಥರು ಒಬ್ಬರೇ ಹಾಡಿರುವ ಹಾಡುಗಳನ್ನು ಒಳಗೊಂಡ (೧೦) ಸಾಂಬ ಸದಾಶಿವ ಎಂಬ ಧ್ವನಿಮುದ್ರಿಕೆಯೂ ಲೋಕಾರ್ಪಣಗೊಂಡಿವೆ.

೨೦೦೬ ರ ಜನವರಿ ೨೯ರಿಂದ ಮಾರ್ಚ್ ೧೭ರವರೆಗೆ ಗೋಖಲೆ ಸಾರ್ವಜನಿಕ ಸಂಸ್ಥೆಯ ಆಶ್ರಯದಲ್ಲಿ ೪೮ ದಿನಗಳ ಕಾಲ ರಾಮಾಯಣ ಪ್ರವಚನಮಾಲಿಕೆ ನಡೆದ ಸಂದರ್ಭದಲ್ಲಿ, ಶಾರದಾ ಗುರುಕುಲದ ವತಿಯಿಂದ ಪ್ರತಿದಿನವೂ ನಡೆದ ಸುಮಾರು ೪೫ ನಿಮಿಷಗಳ ಭಜನೆ, ಶ್ರೋತೃಗಳ ಮತ್ತು ಸಂಸ್ಥೆಯ ವಿಶೇಷ ಆದರಕ್ಕೆ ಪಾತ್ರವಾಯಿತು. ಆ ಸಮಯದಲ್ಲಿ ಧ್ವನಿಮುದ್ರಿತವಾಗಿದ್ದ ಒಂದು ನೂರಕ್ಕೂ ಹೆಚ್ಚು ಹಾಡುಗಳು ಈಗ ಯೌಟ್ಯೂಬ್ ನಲ್ಲಿ ಲಭ್ಯವಿದ್ದು, ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಆಸಕ್ತರಿಗಾಗಿ ಗುರುಕುಲದಿಂದ ಈಗಾಗಲೇ ಅನೇಕ ವರ್ಷಗಳಿಂದಲೂ ತರಗತಿಗಳು ನಡೆದುಬಂದಿದ್ದು, ನೂರಾರು ಸ್ತ್ರೀ ಪುರುಷರು ಇವುಗಳ ಲಾಭ ಪಡೆದಿದ್ದಾರೆ. ಸದ್ಯಕ್ಕೆ ನಿಯತವಾಗಿ ನಡೆಯುತ್ತಿರುವ ಕೆಲವು ತರಗತಿಗಳ ವಿವರ ಹೀಗಿದೆ:

೧. ವಾರದಲ್ಲಿ ಎರಡು ದಿನ ಸಂಜೆ ೬.೦೦ ರಿಂದ ೭.೧೫ ರವರೆಗೆ ಶ್ರೀಮತಿ ಜಯಂತಿ ರಮೇಶ್ ಅವರ ಮನೆಯಲ್ಲಿ (ವಿಳಾಸ: ಖಿಂಚ ಕ್ಲಿನಿಕ್ ಹಾಗೂ ‘ನಿರಾಮಯ’ ಯೋಗ ಶಿಕ್ಷಣ ಸಂಸ್ಥೆಯ ಎದುರು; ಓ.ವಿ.ಎಚ್. ರಸ್ತೆ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ, ಬೆಂಗಳೂರು ೪)
೨. ಗುರುವಾರಗಳಂದು ಬೆಳಿಗ್ಗೆ ೧೧.೩೦ ರಿಂದ ೧.೦೦ ಗಂಟೆಯವರೆಗೆ ಶ್ರೀಮತಿ ಶರ್ಮಿಳಾ ಶ್ರೀರಾಮ್ ಅವರ ಮನೆಯಲ್ಲಿ (ವಿಳಾಸ: ಜಯನಗರ ೫ನೇ ಬ್ಲಾಕ್ ಮೆಟ್ರೋ ನಿಲ್ದಾಣದ ನಮೀಪ, ೩೯ ‘ಎ’ ಕ್ರಾಸ್, ೫ನೇ ಮೇನ್, ಬೆಂಗಳೂರು ೭೦ )
೩. ವಾರದ ಇತರ ದಿನಗಳಲ್ಲಿ ಸಂಜೆ, ನಿರ್ದೇಶಕರ ಮನೆಯಲ್ಲಿ (ನಂ. ೪೧, ೧೨ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು ೫೦)

ಬೇರೆ ಬೇರೆ ವಯಸ್ಸಿನ, ವರ್ಗದ, ಸ್ತ್ರೀಪುರುಷರಿಗಾಗಿ ಇಂತಹ ಇನ್ನಿತರೆ ತರಗತಿಗಳನ್ನು ನಡೆಸಲು ಶಾರದಾ ಗುರುಕುಲ ಸದಾ ಸಿದ್ಧ.

ನಿರ್ದೇಶಕ ಎಚ್.ವಿ.ವಿಶ್ವನಾಥ್ ರವರ ದೂರವಾಣಿ: (ಮೊಬೈಲ್) ೯೮೪೫೯೮೫೪೬೭

ವಿಳಾಸ :
ಶಾರದಾ ಗುರುಕುಲ
ನಂ. ೪೧, ‘ಚಿತ್ರಕೂಟ’, ೧೨ನೇ ಮುಖ್ಯರಸ್ತೆ
ಶ್ರೀನಗರ, ಬೆಂಗಳೂರು ೫೦.
ದೂರವಾಣಿ: ೨೬೬೧೭೬೯೪, ೯೮೪೫೮೧೫೪೬೭
ಈಮೇಲ್  : hv .vishwa @gmail .com

Scroll to top