ಮಹಾತ್ಮರನ್ನು, ವಿಭೂತಿಪುರುಷರನ್ನು, ಉಳಿದವರು ಆದರಿಸಿ ಆರಾಧಿಸುವಲ್ಲಿ ಎರಡು ವಿಭಿನ್ನ ದೃಷ್ಟಿಕೋನಗಳಿರುತ್ತವೆ. ಮೊದಲನೆಯದು, ಆತನ ಶಕ್ತಿ-ಸಾಮರ್ಥ್ಯದ ಬಗ್ಗೆ ನಮ್ಮಲ್ಲಿ ಸಹಜವಾಗಿ ಸ್ಪುರಿಸುವ ವಿಸ್ಮಯ, ಗೌರವ. ಇತರರಿಗೆ ಸುಲಭಸಾಧ್ಯವಲ್ಲದ ಎತ್ತರಕ್ಕೆ ಒಬ್ಬ ವ್ಯಕ್ತಿ ಏರಿದನೆಂದರೆ ಆತನಲ್ಲಿ ಏನೋ ವಿಶೇಷತೆ ಇದ್ದಿರಲೇ ಬೇಕು; ಅದನ್ನು ಆತ ತನ್ನ ತಪಸ್ಸು-ಸಾಧನೆಗಳಿಂದ ಪಡೆದುಕೊಂಡಿರಬಹುದು. ಅಥವಾ ಭಗವಂತನ ಕೃಪೆಯಿಂದ ನಿರಾಯಾಸವಾಗಿ ಗಳಿಸಿರಬಹುದು; ಆದರೆ ಎರಡೂ ಆತನ ಮಹಿಮೆಯ ದ್ಯೋತಕವೇ ಎಂಬ ಅರಿವಿನಿಂದ ಇತರರು ಸಹಜವಾಗಿ ಆತನೆದುರು ತಲೆಬಾಗುತ್ತಾರೆ.
ಈ ವ್ಯಕ್ತಿಗಳು ನಮಗೆ, ನಮ್ಮ ನಿತ್ಯದ ವೈಯಕ್ತಿಕ ಜೀವನಕ್ಕೆ ನೇರವಾಗಿ ಸಂಬಂಧ ಪಡೆದಿರಬಹುದು. ಆದರೆ ಅವರ ಜೀವನ-ಸಾಧನೆಗಳು ಬೇರೆ ಎಲ್ಲರಿಗೂ ಶಾಶ್ವತ ಸ್ಪೂರ್ತಿಯ ಮೂಲ. ದೂರದ ಧ್ರುವನಕ್ಷತ್ರದಂತೆ ಅವರ ಅಸ್ತಿತ್ವ, ಪಯಣಿಗರಿಗೆ ಸದಾ ಪ್ರಖರ-ನಿಖರ-ನಿರ್ಧಿಷ್ಟವಾಗಿ ದಿಕ್ಕು ತೋರುವ ಕಾಯಕ ಅವರದ್ದು. ತಾರಾಮಂಡಲದಲ್ಲಿ ಇವರ ಸ್ಥಾನ ವಿಶಿಷ್ಟ. ಅವರ ಎತ್ತರ-ಬಿತ್ತರ ನಮ್ಮ ಕೈಯಳತೆಗೆ ಸಿಕ್ಕುವುದಲ್ಲ. ಅದನ್ನು ಕಾಣುತ್ತ, ಅದನ್ನೇ ನಂಬಿ ಪಯಣಿಸಬಲ್ಲ ಧೀರ ಸಾಹಸಿಗರಿಗೆ ಈ ನಕ್ಷತ್ರ ಅಮೂಲ್ಯ.
ಇನ್ನು ಕೆಲವರಿದ್ದಾರೆ – ಕೈಗೆಟುಕುವಷ್ಟೇ ಹತ್ತಿರದಲ್ಲಿ, ಇವರ ರೀತಿ ಬೇರೆ. ಮಹಿಮೆಯ ಪ್ರಭಾವಳಿಯೇನೂ ಕಣ್ಣಿಗೆ ಕುಕ್ಕುವುದಿಲ್ಲ. ಎಲ್ಲರಿಗೂ ಬೇಕಾಗಿ, ಎಲ್ಲರಿಗೆ ಸೇರಿದವರಾಗಿ, ಎಲ್ಲರೊಳಗೊಂದಾಗಿ, ಆದರೂ ಎಲ್ಲರಿಗಿಂತ ಭಿನ್ನವಾಗಿ ಇರುವ ಇಂಥವರು, ನಮ್ಮ ಜೊತೆಗಿದ್ದರೆ ಕೈದೀವಿಗೆ; ನಮ್ಮ ನಮ್ಮ ಅನುಕೂಲಕ್ಕೆ, ಶಕ್ತಿಗೆ ಅನುಗುಣವಾದ, ನಾವು ಬೇಕೆಂದಲ್ಲಿಗೆ ಬರುವ, ದೀವಟಿಗೆ.
ನಮ್ಮಿಂದ ದೂರವಾದರೆ, ಇಲ್ಲವೇ ದೂರ ನಿಂತು ನೋಡಿದರೆ ಈ ದೀವಿಗೆ ಕೇವಲ ಪಂಜಲ್ಲ, ಸದಾ ಬೆಳಗುವ ಚಂದ್ರ!
ಸ್ವಾಮಿ ಪುರುಷೋತ್ತಮಾನಂದಜೀಯವರು ಇಂಥವರಲ್ಲೊಬ್ಬರಾಗಿದ್ದರು. ಭುವಿಯಲ್ಲಿದ್ದಷ್ಟು ದಿನವೂ ಅವರು ಸುತ್ತಲಿನ ಅಸಂಖ್ಯ ಜನರಿಗೆ ಪ್ರಿಯರಾಗಿದ್ದುದು ಈ ಕಾರಣದಿಂದಲೇ. ಇತರರ ಪಾಲಿಗೆ ಅವರು (ಸುಮ್ಮನೆ ನೋಡಿ ಸಂತೋಷ ಪಡಬೇಕಾದ) ಒಂದು ಅಮೂಲ್ಯ ರತ್ನ ಮಾತ್ರವಲ್ಲ. ಅದಕ್ಕಿಂತ ಸಾವಿರ ಪಾಲು ಹೆಚ್ಚಾಗಿ, ಇತರರಲ್ಲೂ ಸಾರ್ಥಕತೆಯ ಹೊಳಪನ್ನು ಹೊಳೆಸಬಲ್ಲ, ಧನ್ಯತೆಯ ಬೆಳಕನ್ನು ಜ್ವಲಿಸಬಲ್ಲ ಶಕ್ತಿ. ಇತರರಲ್ಲಿ ಮಹಿಮೆಯನ್ನು ಒತ್ತಿ ತುಂಬಬಲ್ಲ ಪ್ರವೃತ್ತಿ ಅವರಲ್ಲಿತ್ತು.
ಇನ್ನೊಂದು ವಿಶೇಷವೆಂದರೆ ‘ಅವರವರ ಭಾವಕ್ಕೆ’ ತಕ್ಕಂತೆ ಶಕ್ತಿ-ಸಾಂತ್ವನ, ಯುಕ್ತಿ-ಭುಕ್ತಿ, ಪ್ರೀತಿ-ವಿರಕ್ತಿ-ಭಕ್ತಿ….ಫಲಗಳನ್ನು ನೀಡಿದ ಕಲ್ಪತರು ಅವರಾಗಿದ್ದರು. ಆದ್ದರಿಂದಲೇ ವೈವಿಧ್ಯಮಯ ಜನರ ಪಾಲಿಗೆ ಆತ್ಮೀಯರಾದರು. ಬೆಂಗಳೂರಿಂದ ಬೆಳಗಾಮಿನವರೆಗೆ ಎಲ್ಲರಿಗೂ ನಮ್ಮವರೆನಿಸಿದರು.
ಅವರು ಕೇವಲ ಪುರುಷಮಣಿಯಾಗಿರಲಿಲ್ಲ, ಪರುಷಮಣಿಯಾಗಿದ್ದರು.
ಈ ಮಾತಿಗೆ ಸಾಕ್ಷ್ಯವೇನು? ಉಂಡ ಊಟಕ್ಕೆ ತುಂಬಿದ ಹೊಟ್ಟೆಗಳೇ ಸಾಕ್ಷಿ!
ಆದರೆ ಉಂಡವರಲ್ಲೂ ಹೆಚ್ಚಿನವರು, ತಮ್ಮೊಳಗೇ ಮೆಲುಕು ಹಾಕುತ್ತಾ ಆನಂದಿಸುವ ಮೌನಪ್ರಿಯರು, ಇಲ್ಲವೇ ಅದನ್ನು ಬಣ್ಣಿಸ ಹೊರಟಾಗ ಮೂಕರು!
ಆದರೆ ಉಂಡವರಲ್ಲೂ ಹೆಚ್ಚಿನವರು, ತಮ್ಮೊಳಗೇ ಮೆಲುಕು ಹಾಕುತ್ತಾ ಆನಂದಿಸುವ ಮೌನಪ್ರಿಯರು, ಇಲ್ಲವೇ ಅದನ್ನು ಬಣ್ಣಿಸ ಹೊರಟಾಗ ಮೂಕರು!
ಇರಲಿ; ಕೆಲವರಾದರೂ ತಮ್ಮೊಳಗಿನ ಭಾವಕ್ಕೆ ಶಬ್ದರೂಪ ಕೊಟ್ಟಿದ್ದಾರೆ. ಕಳೆದೊಂದು ವರ್ಷದಲ್ಲಿ ‘ಜ್ವಲಂತಜ್ಯೋತಿ’ ಶೀರ್ಷಿಕೆಯಡಿಯಲ್ಲಿ ವಿವೇಕಹಂಸ ಪ್ರಕಟಿಸಿದ ಕೆಲವು ಲೇಖನಗಳ ಸಂಕಲನ ಈ ಹೊತ್ತಗೆ. ಹೃದಯಗರ್ಭಗಳಲ್ಲಿ ಅಡಗಿರುವ ಇಂಥ ಮತ್ತಷ್ಟು ವಿಚಾರಗಳು ಹೊರಬರಲು ಇದು ಪ್ರೇರಕವಾಗಲಿ!
– ಎಚ್.ವಿ.ವಿಶ್ವನಾಥ್
Add your articles
If you are interested to post your articles on our website, please send in your articles here. Also, send us a brief description about yourself to include in about author’s column.
Error: Contact form not found.
ಪುರುಷಮಣಿ, ಪರುಷಮಣಿ