ದೊಡ್ಡವರ ಬುದ್ಧಿಮಾತನ್ನು ನಮಗೆ ಬೇಕಾದಂತೆ ತಿರುಗಿಸುವುದು; ಪ್ರಸಿದ್ದವಾದ ಹೇಳಿಕೆಯನ್ನು ನಮ್ಮ ಸಂದರ್ಭಕ್ಕೆ ಒದಗುವ ಹಾಗೆ, ಮೂಲೋದ್ದೇಶಕ್ಕೆ ವಿರುದ್ಧವಾಗಿ ಅರ್ಥೈಸುವುದು; ಇವೆಲ್ಲ ಎಲ್ಲರೂ ಬಲ್ಲ ಹಳೆಯ ವಿದ್ಯಮಾನವೇ. ಈ ತರದ ‘ಅನುಕೂಲವೇದಾಂತ’ ಬಹುಶಃ ವೇದಾಂತಕ್ಕಿಂತಲೂ ಪ್ರಾಚೀನ!
ಆದರೂ ‘ಪರಚಿಂತೆ ಎಮಗೆ ಏಕೆ, ಅಯ್ಯಾ?’ ಎಂಬ ಬಸವಣ್ಣನವರ ಪ್ರಶ್ನೆಯ ರೂಪದ (ಹಿತ) ವಚನಕ್ಕೆ ಪ್ರತಿಯಾಗಿ ‘ಪರಚಿಂತೆ ಎಮಗೆ ಬೇಕು, ಬೇಕೇ..ಬೇಕು!’ ಎಂದು ಸಾರುವ ಈ ಬೇ-ಜವಾಬ್ ಶೀರ್ಷಿಕೆಯನ್ನು ನೋಡಿ ಹಿಂದಿನವರು (ಈಗಲೂ ಇರುವವರು) ಬೇ-ಸರಿಸಿ ಹುಬ್ಬುಗಂಟಿಕ್ಕಿದರೆ ಆಶ್ಚರ್ಯವೇನಿಲ್ಲ.
ಇದಕ್ಕೆ ನನ್ನ ಸಮಜಾಯಿಷಿಕೆ ಎರಡು ಮಡಿಕೆಯದು:
೧. ಈ ಶೀರ್ಷಿಕೆ ನನ್ನದಲ್ಲ; ‘ವಿವೇಕಹಂಸ’ದ ಮಾನ್ಯ ಸಂಪಾದಕ-ಪ್ರಕಾಶಕ-ಮುದ್ರಕರದು.
೨. ಆದರೆ, ಯೋಚಿಸಿದ ಮೇಲೆ ಈಗ ನನಗೂ ಹಾಗೆ ಅನ್ನಿಸುತ್ತಿದೆ: ಪರಿಚಿಂತೆ ಎಮಗೆ ‘ಏಕೆ?’ ಎನ್ನುವುದಕ್ಕಿಂತ, ‘ಬೇಕು’ ಎನ್ನುವುದೇ ಸರಿ ಅಂತ!
ಅದು ಹೇಗೆ? ಮೊದಲನೆಯದಾಗಿ, ಪರ ಶಬ್ದಕ್ಕೆ ‘ಮೇಲಿನ’ ‘ಹೆಚ್ಚಿನ’ ಎಂಬ ಅರ್ಥವೂ ಇದೆ. ‘ಇಹ’ಕ್ಕಿಂತಲೂ ಶ್ರೇಷ್ಠವಾದದ್ದು ಈ ‘ಪರ’. ನಮ್ಮ ಸಾಧು-ಸಜ್ಜನರೂ ಶಾಸ್ತ್ರಗ್ರಂಥಗಳೂ ಹೇಳಿರುವುದು ‘ಇಹದ ಚಿಂತೆಗೆ ಒಂದು ಮಿತಿ ಹಾಕಿ ಪರದ ಕಡೆಗೆ ಗಮನ ಕೊಡಿ; ಪರವೇ ಸತ್ಯ, ಇಹವಲ್ಲ’ ಅಂತಲೇ ತಾನೆ? ಪರಚಿಂತೆ ಎಂದರೆ ಪರದ-ಪರಲೋಕದ ಚಿಂತೆ; ಪರಮಾತ್ಮನ ಚಿಂತೆ; ಪರಾತ್ ಪರನ ಚಿಂತೆ. ಆದ್ದರಿಂದ ಪರಚಿಂತೆ ಒಳ್ಳೆಯದೇ; ಅದು ನಮಗೆ ಬೇಕಾದದ್ದೇ!
ಆದರೆ ಈ ವಿವರಣೆಯನ್ನು ಎಲ್ಲರೂ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. “ಅಯ್ಯಾ! ಹಾಗಲ್ಲ ಅದು. ಪರ ಎಂದರೆ ಇಲ್ಲಿ ‘ಬೇರೆಯ’ ‘ಅನ್ಯ’ ಅಂತರ್ಥ. ಅದರಲ್ಲೂ ‘ಎಮ್ಮಯ ಚಿಂತೆ…’ ಅಂತ ಬರುವುದರಿಂದ ಪರ ಎಂದರೆ ‘ಬೇರೆಯವರು’ ಅಂತಲೇ ಇಂಗಿತ. ‘ಸುಮ್ಮನೆ ಅವರಿವರ ಚಿಂತೆ ಬಿಟ್ಟು ನಮ್ಮ ಚಿಂತೆ ನಾವು ಮಾಡಿಕೊಳ್ಳೋಣ’ ಎನ್ನುವುದು ಇಲ್ಲಿನ ಮೂಲೋದ್ದೇಶ” – ಇದು ಪ್ರತಿವಾದ.
ನಿಜ; ಇಷ್ಟಕ್ಕೂ ಬಸವಣ್ಣ ಹೇಳಿದ್ದೇನು?
ಪರಚಿಂತೆ ಎಮಗೆ ಏಕೆ, ಅಯ್ಯಾ? ಎಮ್ಮಯ ಚಿಂತೆ ಎಮಗೆ ಸಾಲದೇ?
ಕೂಡಲಸಂಗನು ಒಲಿವನೋ ಇಲ್ಲವೋ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು!
ಎಂದರೆ ‘ಪರ-ದೇವನಾದ ಕೂಡಲಸಂಗನ ಕೃಪೆ ಗಳಿಸುವ ಬೇಕಾದ ಪ್ರಯತ್ನದಲ್ಲಿ ಇರಬೇಕಾದವರು ನಾವು; ಇಂತಹ ನಮಗೆ ಪರ(ರ) ಚಿಂತೆ ಬೇಕಿಲ್ಲ; ನಾವು ನಮ್ಮ ಸ್ವಂತ, ಖಾಸಗಿ ವಿಚಾರದ ಕಡೆಗೆ ಗಮನ ಕೊಡೋಣ’ ಎನ್ನುವಂತಹ ‘ಸ್ವಾರ್ಥದೃಷ್ಟಿ’ ಇಲ್ಲಿ ಕಾಣುತ್ತದೆ. (ಹೀಗೆ ದೇವರ ಕೃಪೆಗಾಗಿ ಮಾಡುವ ಪ್ರಯತ್ನ ನಿಜಕ್ಕೂ ಸ್ವಾರ್ಥವೋ ಪರಾರ್ಥವೋ ಆಮೇಲೆ ನೋಡೋಣ.)
ತಮಾಷೆಯೆಂದರೆ, ಬಸವಣ್ಣನವರ ಈ ಬುದ್ದಿಮಾತು ಕೇವಲ ತಮಗೆ ತಾವೇ ಹೇಳಿಕೊಂಡ ಸ್ವಗತದ ಉದ್ಗಾರವಲ್ಲ. ‘ಎನ್ನ ಚಿಂತೆ ಎನಗೆ ಸಾಲದೇ’ ಎನ್ನದೆ, ‘ಎಮಗೆ’ ಎನ್ನುವಾಗಲೇ ‘ಇತರರ’ ಚಿಂತೆ ಬಂತಲ್ಲ! ಹಾಗಾದರೆ ಈ ಕಾಳಜಿ ಪರಚಿಂತೆಯೋ ‘ಆತ್ಮ’ ಚಿಂತೆಯೋ?
ಇರಲಿ; ಹೆಚ್ಚು ‘ಕುತರ್ಕ’ ಮಾಡದೆ, ಈ ಸಾಲುಗಳ, ಹೃದಯಕ್ಕೆ ತಟ್ಟುವಂಥಹ ಅರ್ಥವನ್ನೇ ತೆಗೆದುಕೊಳ್ಳೋಣ. ಬಸವಣ್ಣ ಎಂದರೆ ಯಾರು? ಶರಣವರೇಣ್ಯ, ಭಕ್ತಿಭಂಡಾರಿ, ಮಹಾ ಕರ್ಮಯೋಗಿ, ಮಾನವತಾವಾದಿ, ಸಮತಾವಾದಿ, ವಸ್ತುನಿಷ್ಠ-ಆದರ್ಶವಾದಿ…ಇಂಥವರ ಜೀವನ-ಬೋಧನೆಗಳ ಒಟ್ಟಾರೆ ಹಿನ್ನೆಲೆಯಲ್ಲಿ ನೋಡಿದರೆ ಈ ವಚನದ ಭಾವಾರ್ಥ: ‘ನಮಗಾಗಲಿ ಪರರಿಗಾಗಲಿ ಒಳಿತು ಮಾಡದಂತಹ ಕ್ಷುದ್ರ ವಿಚಾರಗಳ ಕಡೆಗೆ ನಮ್ಮ ಗಮನ ಬೇಡ; ಕೈಲಾಸ ಎನ್ನುವುದು ಇದ್ದರೆ ಅದು ಪರಸ್ಪರ ಪ್ರೀತಿ. ಸಹಕಾರ, ಸಮಾನತೆಗಳನ್ನು ಆಧರಿಸಿದ ಮಾನವೀಯ ಸಂಬಂಧದಲ್ಲಿ ಮಾತ್ರವೇ; ಈ ಮೌಲ್ಯಗಳನ್ನು ಹೆಚ್ಚಿಸುವಂತಹ ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿ ಜೀವಿಸೋಣ.’
ಈ ವಚನವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಬಸವಣ್ಣನವರ ಜೀವನವೇ ನಮಗೆ ಮಾರ್ಗದರ್ಶಕ ಎಂದು ಭಾವಿಸಲು ಅಡ್ಡಿಯಿಲ್ಲ. ಅವರು ವೃತ್ತಿಯಿಂದ ರಾಜ್ಯದ ಮಂತ್ರಿಗಳು; ರಾಜನ ಆಪ್ತರು; ಆಮೇಲೆ ವಿವಾಹಿತರು. ಎಂದರೆ, ರಾಜ್ಯದ ಅತ್ಯಂತ ಪ್ರತಿಷ್ಠೆಯ, ಉನ್ನತ ಅಧಿಕಾರ-ಸೌಲಭ್ಯಗಳನ್ನು ಒದಗಿಸುವ ಹುದ್ದೆಯಲ್ಲಿರುವುದಾಗಲಿ ಹೆಂಡತಿ-ಮಕ್ಕಳೊಂದಿಗನಾಗಿ ಗೃಹಸ್ಥಜೀವನ ನಡೆಸುವುದಾಗಲಿ ಸ್ವಾರ್ಥದ್ಯೋತಕವಲ್ಲ ಎಂದಂತಾಯಿತು. ಎಂದರೆ, ಒಬ್ಬ ಪತಿಯಾಗಿ, ತಂದೆಯಾಗಿ ಕರ್ತವ್ಯಗಳನ್ನು ನಿರ್ವಹಿಸುತ್ತ ಮನೆಮಂದಿಗಾಗಿ ಸಂಪಾದಿಸುವುದು. ಅವರ ಶ್ರೇಯೋಚಿಂತನೆ ಮಾಡುವುದು ಯಾವುದೂ ಸ್ವಾರ್ಥವಲ್ಲ. ಇನ್ನು ಮಂತ್ರಿ ಎಂದಮೇಲೆ ಅವರ ಕಾಳಜಿಗೆ ಒಳಪಡುವ ವಿಷಯಗಳಿಗೆ ಮಿತಿಯಿದೆಯೇ? (ಇಡೀ ಭಾರತದಂತಹ ಬೃಹತ್ ದೇಶದಲ್ಲಿ ಕೂಡ ಯಾವ ಮೂಲೆಯಲ್ಲಿ ಯಾವ ಅನಾಹುತ ನಡೆದರೂ ಸಂಬಂಧಿಸಿದ ಗೃಹ/ರೈಲ್ವೆ ಸಚಿವರನ್ನು ನೈತಿಕ ಹೊಣೆಗಾರರನ್ನಾಗಿ ಮಾಡುವ ಪದ್ಧತಿ ಇಂದಿಗೂ ಇರಬೇಕಾದರೆ, ಆಗಿನ ಕಾಲದಲ್ಲಿ ಬಸವಣ್ಣನಂತಹ ಆತ್ಮಸಾಕ್ಷಿಯುತ ಅಧಿಕಾರಿಯ ಜವಾಬ್ದಾರಿ ಇನ್ನೆಷ್ಟಿದ್ದಿರಬೇಕು!) ನೂರಾರು ಜನರ ಸರಿ-ತಪ್ಪುಗಳಿಗೆ ಇವರು ಜವಾಬ್ದಾರಿ ಎಂದಮೇಲೆ ಅನೇಕರ ಮೇಲೆ ಕಣ್ಣಿಟ್ಟು, ಅವರ ಅಕಾರ್ಯ-ಕುಕಾರ್ಯಗಳನ್ನು ನಾನಾ (ಸಾಮ-ದಾನ-ಭೇದ-ದಂಡ, ಗುಪ್ತ-ವ್ಯಕ್ತ) ತಂತ್ರಗಳಿಂದ ಸರಿಪಡಿಸುತ್ತಿರಬೇಕು; ಶತ್ರುರಾಜ್ಯಗಳ, ಒಳಗಿನ ಕುತಂತ್ರಿಗಳ, ಕಳ್ಳಕಾಕರ ಅಪಾಯಗಳನ್ನು ನಿವಾರಿಸುವ ವ್ಯವಸ್ಥೆ ಸರಿಯಾಗಿಲ್ಲದೆ ಹೋದರೆ, ಸಕಲ ಪ್ರಜೆಗಳ ನಿಂದನೆಗೆ ಬಲಿಯಾಗಬೇಕು! ಈ ನಡುವೆ ತನ್ನ ಮೇಲೆ ಬಂದೇ ಬರುವ ಎಲ್ಲ ಬಗೆಯ ಆರೋಪ-ಆಪಾದನೆಗಳನ್ನೂ ಎದುರಿಸುತ್ತ, ಅಧಿಕಾರವನ್ನು ‘ಅನುಭವಿಸ’ಬೇಕು! ಆದರೆ ಈ ಯಾವುದೂ ‘ಪರಚಿಂತೆ’ಯ ಲೆಕ್ಕಕ್ಕೆ ಬರುವುದಿಲ್ಲ ಎಂದರೆ ಆಶ್ಚರ್ಯ ಅಲ್ಲವೇ? ಇದೆಲ್ಲ ಒಂದು ಬದಿಯಾದರೆ, ಅವರು ಸ್ವಯಂ ಪ್ರೀತಿಯಿಂದ ಸ್ಥಾಪಿಸಿ ನಡೆಸುತ್ತಿದ್ದ ‘ಅನುಭವಮಂಟಪ’ದ ನಿರ್ವಹಣೆ, ಅಲ್ಲಿನ ಅನ್ನದಾಸೋಹದ ಹೊಣೆ ಇನ್ನೊಂದು ಬದಿ. ಯೋಚಿಸಿ ನೋಡಿ-ಇವು ಯಾವುವೂ ಪರಚಿಂತೆಯಲ್ಲ! ಎಲ್ಲವೂ ಸ್ವಕೀಯ ಚಿಂತೆಯೇ! ಆತ್ಮಚಿಂತೆಯೆ! ಎಂದಮೇಲೆ, ಸಾಮಾನ್ಯರಾದ ನಾವು ದಿನಂಪ್ರತಿ ಜೀವನನಿರ್ವಹಣೆಗಾಗಿ ಮಾಡುವ ನ್ಯಾಯಬದ್ಧ, ನೀತಿಬದ್ದ ಕೆಲಸ ಯಾವುದೊಂದೂ ‘ಪರಚಿಂತೆ’ಯ ಲೆಕ್ಕಕ್ಕೆ ಬರುವುದಿಲ್ಲ. ಹಾಗಾದರೆ, ನಿಜಕ್ಕೂ ಬಸವಣ್ಣ ಹೇಳುವ, ನಿಂದನೀಯವಾದ ಪರಚಿಂತೆ ಯಾವುದಪ್ಪಾ?
ಇದನ್ನೂ ನಾವು, ಅವರ ಮತ್ತು ಅಂತಹ ಮಹಾತ್ಮರ ಜೀವನವನ್ನು ಗಮನಿಸಿ, ಹೃದಯದಿಂದ ಭಾವಿಸುವುದಾದರೆ ನಮಗೇ ಹೊಳೆಯುತ್ತದೆ: ಸಮಸ್ತರ, ಅದರಲ್ಲೂ ಅಧಿಕ ಸಜ್ಜನರ, ದೀರ್ಘಕಾಲೀನ ಐಹಿಕ-ಆಮುಶ್ಮಿಕ ಶ್ರೇಯಸ್ಸಿಗೆ ಕಾರಣವಾಗುವಂತಹ ವಿಚಾರ ಮತ್ತು ಕ್ರಿಯೆಯೆಲ್ಲವೂ ಅವರ ದೃಷ್ಟಿಯಲ್ಲಿ ಸ್ವಕೀಯ, ಕರ್ತವ್ಯ, ಆಚರಣೀಯ; ಕುಟುಂಬದ, ಸಮಾಜದ, ರಾಷ್ಟ್ರದ ಸದಸ್ಯನಾಗಿ, ಅಧಿಕಾರಿಯಾಗಿ. ವಿಶ್ವಕುಟುಂಬಿಯಾಗಿ ತಮ್ಮ ಪಾಲಿನ ಧರ್ಮಸಮ್ಮತವಾದ ಸಹಜ ಕರ್ತವ್ಯವೇನೇ ಇದ್ದರೂ ಅದು ‘ಪರಚಿಂತೆ’ಯಲ್ಲದ ‘ಪರಮೇಶ್ವರ ಚಿಂತೆ’. ಹಿತಚಿಂತನೆಯ ವಸ್ತುವಿನ ವ್ಯಾಪ್ತಿ ಸಂಕುಚಿತವಾದಷ್ಟೂ (ಎಂದರೆ ರಾಷ್ಟ್ರ-ರಾಜ್ಯಗಳಿಂದ ತನ್ನ ಸಮುದಾಯ – ಕುಟುಂಬಗಳಿಗೆ, ಕೊನೆಗೆ ತನ್ನ ವೈಯಕ್ತಿಕ ಸುಖಕ್ಕೆ ಸಮೀಪಿಸಿದಂತೆಲ್ಲ) ಅದು ಸ್ವಾರ್ಥ, ತ್ಯಾಜ್ಯ, ತಿರಸ್ಕರಣೀಯ; ಅದೇ ಪರಚಿಂತೆ.
ಇದೆಲ್ಲ ಹಾಗಿರಲಿ; ನನಗೆ ತೋರುವಂತೆ ಇಲ್ಲಿನ ಮೂಲ ಸಮಸ್ಯೆ, ಸ್ವಾರಸ್ಯ ಇದು:
ಪರರು-ಪರರದು ಎಂದರೆ ಯಾರು, ಯಾವುದು?
ತಾನು-ತನ್ನದು ಎಂದರೆ ಯಾರು, ಯಾವುದು?
ಸ್ವಾರ್ಥ-ಪರಾರ್ಥಗಳನ್ನು ಪ್ರತ್ಯೇಕಿಸುವುದು ಹೇಗೆ?
ಸ್ವಚಿಂತೆಯಿಲ್ಲದ ಪರಚಿಂತೆ ಸಾಧ್ಯವೇ?
ಇದು, ಬ್ರಹ್ಮಾಂಡದಷ್ಟು ವಿಶಾಲ ವಿಷಯ; ಪರಮಾಣುವಿನಷ್ಟು ಕ್ಲಿಷ್ಟ ವಿಚಾರ. ನಮ್ಮ ಇಡೀ ಅಸ್ಥಿತ್ವದ, ಜೀವಿತೋದ್ದೇಶದ ವಿಮರ್ಶೆ ಇಲ್ಲಿ ಅಡಗಿದೆ.
ಜೀವಲೋಕದದಲ್ಲಿ ಸ್ವಾರ್ಥ-ಪರಾರ್ಥಗಳು ಒಂದರೊಡನೆ ಒಂದು ಎಷ್ಟು ಹಾಸುಹೊಕ್ಕಾಗಿವೆ ಎಂದರೆ, ನಿಜಕ್ಕೂ ಅದು ಬೀಜವೃಕ್ಷನ್ಯಾಯದಷ್ಟೇ ಸಂಕೀರ್ಣ. ಯಾವುದು ಮೊದಲು; ಯಾವುದರಿಂದ ಯಾವುದು? – ಹೇಳುವುದು ಕಷ್ಟ. ನಮ್ಮ ವರ್ತನೆ – ಕಾರ್ಯಗಳಲ್ಲಿ ಯಾವುದನ್ನಾದರೂ ಪೂರ್ತಿ ಸ್ವಾರ್ಥಪ್ರೇರಿತ ಎಂದಾಗಲಿ, ಸಂಪೂರ್ಣ ನಿಃಸ್ವಾರ್ಥದ್ಯೋತಕ ಎಂದಾಗಲಿ ಹೇಳುವುದು ದುಸ್ಸಾಧ್ಯ.
ಮಗುವಿನ ಮೇಲಿನ ಮಾತಾಪಿತರ ಮಮತೆ ಸ್ವಾರ್ಥವೇ? ‘ಅಲ್ಲ; ಅದು ಪ್ರಕೃತಿದತ್ತ ವರ, ಸೌಭಾಗ್ಯ’ ಎನ್ನುವುದಾದರೆ, ತನ್ನ ಮಕ್ಕಳ ಮೇಲಿನ ಧೃತರಾಷ್ಟ್ರನ ಮಮಕಾರ (ಹಾಗೆಯೇ ಕೈಕೇಯಿಯ ಪುತ್ರಪ್ರೇಮ) ಲೋಕದ ತುಚ್ಛೀಕರಣಕ್ಕೆ ಈಡಾಗುವುದೇಕೆ?
ದೇಶದ ಕೋಟಿ ಜೀವಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನು ಪಣವಿಟ್ಟು, ವೈರಿಯ ಗುಂಡಿಗೆ ಗುಂಡಿಗೆಯೊಡ್ಡಿ, ನೆಲ-ಜಲ-ಅನಲಗಳಲ್ಲಿ ಕಾದು ಕುದ್ದು ಕಾದುತ್ತಿರುವ ಒಬ್ಬ ಸಾಮಾನ್ಯ ಸೈನಿಕನನ್ನು ನೆನಪಿಸಿಕೊಳ್ಳಿ. ನಿಃಸ್ವಾರ್ಥತೆಯ ಅತ್ಯುಚ್ಚ ಆದರ್ಶಮೂರ್ತಿ ಇವನೆಂದು ಒಪ್ಪದವರು ಯಾರು? ಅವನ ತ್ಯಾಗವನ್ನು ಬಣ್ಣಿಸುವ ಲತಾ ಮಂಗೇಶ್ಕರರ ಹಾಡನ್ನು ಕೇಳಿದಾಗ ಕಣ್ಣೇರು ಒರಸದವರು ಯಾರು?
ನಿಜ; ಆದರೆ ಅವನಲ್ಲಿ ಸ್ವಾರ್ಥವೇ ಇಲ್ಲವೆಂದು ಹೇಳಬಹುದೇ? ಹತ್ತಾರು ಬಗೆಯ ಸಂಬಳ-ಸವಲತ್ತು-ಬಡ್ತಿ-ಸೌಲಭ್ಯಗಳು ಅವನಿಗಿಲ್ಲವೇ? ಮುಂದಿನ ವರ್ಷ ಮೇಲ್ದರ್ಜೆಗೇರಿ ಇನ್ನಷ್ಟು ಆರಾಮವಾಗಿರಬೇಕೆಂಬ ನಿರೀಕ್ಷೆ ಅವನಿಗಿಲ್ಲವೇ? ಅವಧಿ ಮುಗಿದೊಡನೆ ಸೈನ್ಯದಿಂದ ನಿವೃತ್ತನಾಗಿ ಬೇರೊಂದು ಉದ್ದಿಮೆಯಲ್ಲಿ ತೊಡಗಿ ಮುಂದುವರಿಯುವ ಕನಸು ಒಳಗಿಲ್ಲವೇ; ಊರಲ್ಲಿರುವ ತನ್ನ ಹೆಂಡತಿ-ಮಕ್ಕಳ ಕ್ಷೇಮದ ಚಿಂತೆಯಿಲ್ಲವೇ? ತನಗೇನಾದರೂ ಹೆಚ್ಚುಕಡಿಮೆಯಾದರೆ ಮನೆಮಂದಿಗೆ ವಿಮೆಯ ರಕ್ಷಣೆ ಉಂಟೆಂಬ ಕಿಂಚಿತ್ ಸಮಾಧಾನ ಕೂಡ ಇದೆಯಲ್ಲವೇ? ನಿಜಕ್ಕೂ ಈ ಎಲ್ಲ ಭರವಸೆಗಳನ್ನು ಸರ್ಕಾರ ಮೊದಲೇ ಅವನ ಮುಂದೆ ತೆರೆದಿಟ್ಟಿದ್ದರಿಂದಲೇ ಅವನಂಥವರು ಇಷ್ಟಪಟ್ಟು ಸೇನೆಗೆ ಸೇರಲು ಬರುತ್ತಾರೆ.
ಹಾಗೆಂದ ಮಾತ್ರಕ್ಕೆ ಆ ಸೈನಿಕನನ್ನು ಸ್ವಾರ್ಥಿ, ಲೋಭಿ, ಅಲ್ಪ ಎನ್ನಲಾದೀತೆ! ಛೆ, ಯಾರೂ ಒಪ್ಪುವುದಿಲ್ಲ. (ಆತನ ಇನ್ನೆಷ್ಟೋ ಲೋಪ-ದೋಷಗಳನ್ನು ಕೂಡ ಗಣಿಸಲು ನಮಗೆ ಮನಸ್ಸು ಬರುವುದಿಲ್ಲ) ಏಕೆ, ಇದಕ್ಕೆ ಆಧಾರವೇನು? – ತಕ್ಷಣ ನಿಖರವಾದ ಉತ್ತರ ಹೊಳೆಯಲಾರದು. ಆದರೆ, ನಮ್ಮ-ನಿಮ್ಮಂಥವರ ದೃಷ್ಟಿಯಲ್ಲಿ ಆ ಕೆಲಸ ಅತಿ ಕಠಿಣ, ಅಪಾಯಕಾರಿ; ಜೊತೆಗೆ ಅತಿ ಕಡಿಮೆ ಪ್ರತಿಫಲದ್ದು; ಆದ್ದರಿಂದ ಅವನ ಬಗ್ಗೆ ಸಹಜವಾಗಿ ‘ಪಾಪ!’ ಎನ್ನುತ್ತೇವೆ; ಮರುಗುತ್ತೇವೆ. ಅವನು ನಿಃಸ್ವಾರ್ಥಿ, ದೇಶಪ್ರೇಮಿ ಎನ್ನುತ್ತೇವೆ. (ಆ ತ್ಯಾಗಕ್ಕೆ ಸಿದ್ಧವಿರುವ ಇನ್ನೆಷ್ಟೋ ಯೋಗ್ಯ ಯುವಕರಿಗೆ ಆ ಹುದ್ದೆ ಸಿಗದೆಯೂ ಇರಬಹುದು; ಇವರಿಗೆ ಆ ಸೈನಿಕರಿಗಿಂತಲೂ ಹೆಚ್ಚಿನ ಮರುಕ ತೋರಬೇಕಲ್ಲವೆ? ಈ ವಿಷಯ ಹಾಗಿರಲಿ.)
ಹಾಗಾದರೆ ಅವನಿಗಿಂತಲೂ ದೊಡ್ಡ ನಿಃಸ್ವಾರ್ಥಿ, ಪರಹಿತಚಿಂತಕ ಯಾರಾದರೂ ಇದ್ದಾರೆಯೇ?
ಉದಾಹರಣೆಗೆ, ಅವನ ಮೇಲಿನ ದಫೇದಾರ? ಇನ್ನೂ ಮೇಲುಮೇಲಿನ ಲೆಫ್ಟಿನೆಂಟ್, ಕರ್ನಲ್, ಕಮಾಂಡರ್, ಮೇಜರ್…?
ಯಾಕೋ ಇವರನ್ನೆಲ್ಲ ನೆನಪಿಸಿಕೊಂಡರೆ ನಿಃಸ್ವಾರ್ಥತೆಯ ಕಲ್ಪನೆ ಅಷ್ಟೊಂದು ಉತ್ಕಟವಾಗಿ ಮೂಡಲಾರದು! ಯಾಕಿರಬಹುದು, ಅವರು ಸ್ವತಃ ಪ್ರಾಣತ್ಯಾಗ ಮಾಡುವ ಸಾಧ್ಯತೆ ಕಡಿಮೆಯೆಂದೇ? ಅವರಿಗೆ ಸಿಗುವ ಸುಖ-ಸವಲತ್ತುಗಳು ಹೆಚ್ಚೆಂದೇ?
(ನಾನಾ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಾಣ’ತ್ಯಾಗ’ವನ್ನಂತೂ ಯಾರೂ ಮೆಚ್ಚುವುದಿಲ್ಲ !)
ಇನ್ನು ಸೇನೆಯಲ್ಲೇ ಸೇವೆ ಸಲ್ಲಿಸುವ ಇತರ ಅಧಿಕಾರಿಗಳು, ಶಿಕ್ಷಕರು, ಕಾರ್ಮಿಕರು, ವೈದ್ಯರು, ದಾದಿಯರು… ಇವರದ್ದೆಲ್ಲ ಅಂಥಾ ಹೆಚ್ಚುಗಾರಿಕೆಯೆಂದು ನಮಗೆ ತೋರುವುದೇ ಇಲ್ಲ.
ಸೈನ್ಯಕ್ಕೆ ಪ್ರಧಾನ ದಂಡನಾಯಕರೆನಿಸಿದ ಮಂತ್ರಿ-ರಾಷ್ಟ್ರಪತಿಗಳ ಕುರಿತಾಗಂತೂ ಸಾಮಾನ್ಯವಾಗಿ ಇಂಥ ಭಾವನೆಯೇ ಬಾರದಾಗಿದೆ!
ಆದರೆ ಇದನ್ನು ಸದಾ ಸಕಾರಣ, ಸಾಧಾರ ಎನ್ನಬಹುದೇ? ಏಕೆ, ಕಲಾಂ ಸಾಹೇಬರನ್ನು ನೆನಪಿಸಿಕೊಳ್ಳಿ!
ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ, ಶ್ರೀರಾಮಕಾರ್ಯದಲ್ಲಿ ಅಳಿಲಿನ ಸೇವೆಯೇ ಸೇವೆ; ಉಳಿದ ವಾನರರ ಪಾತ್ರ ನಗಣ್ಯ ಎನ್ನಬಹುದೇ? ಛೆ, ಛೆ, ಇಂಥ ವಾದ ಖಂಡಿತ ಖಂಡನೀಯ!
ಇದೇ ತರ್ಕವನ್ನು ಬೆಳೆಸಿ ನೋಡಿದಾಗ, ಯಾವುದೇ ಸಂಸ್ಥೆಯಲ್ಲಿ, ಸಮಾಜದಲ್ಲಿ ಯಾರೊಬ್ಬನ ನಿಃಸ್ವಾರ್ಥತೇ, ಮಾನವೀಯತೆ, ತ್ಯಾಗವನ್ನೂ ಇನ್ನೊಬ್ಬನದ್ದಕ್ಕಿಂತ ಒಟ್ಟಿನಲ್ಲಿ ತುಲನೆ ಮಾಡಿ ಹೇಳುವುದಾದರೆ, ಸೇನೆಯಲ್ಲಿ ಯಾರೊಬ್ಬರ ಪಾತ್ರವೂ ಕಡಿಮೆಯಲ್ಲ. ಪ್ರಾಣತ್ಯಾಗ ಮಾಡುವ ಅತಿ ಕೆಳಗಿನ ಜವಾನನ ರಾಷ್ಟ್ರಪ್ರೇಮಕ್ಕಿಂತ, ಅವನನ್ನೂ ಅವನ ಮೇಲಿನ ನೂರೆಂಟು ಹಂತಗಳ ಅಧಿಕಾರಿಗಳನ್ನೂ ಪ್ರೇರಿಸಿ ಪ್ರಚೋದಿಸಿ ಪ್ರೋತ್ಸಾಹಿಸಿ ನೈತಿಕ ಬೆಂಬಲವೀಯುತ್ತಿರುವ, ಸ್ಪೂರ್ತಿಯ ಸೆಲೆಯಾಗಿರುವ ರಾಷ್ಟ್ರನಾಯಕರ ದೇಶಭಕ್ತಿ ಯಾವ ದೃಷ್ಟಿಯಲ್ಲೂ ಕಡಿಮೆಯದಲ್ಲ. ವಾಸ್ತವವಾಗಿ ಸಾವಿರ ಪಟ್ಟು ಹೆಚ್ಚು ಎನ್ನಬೇಕು. ಇವರು ಸದಾ ಬೆಂಜ್ ಕಾರಿನಲ್ಲೇ ಓಡಾಡಿದರೂ ಹಂಸತೂಲಿಕಾತಲ್ಪದಲ್ಲೇ ಮಲಗಿದರೂ ಇವರ ಸೇವಾದೃಷ್ಟಿ, ತ್ಯಾಗ ಸೈನಿಕನಿಗೆ ಹೋಲಿಸಿದರೆ ಅಸಂಖ್ಯ ಪಟ್ಟು ಹೆಚ್ಚು. ಆದರೆ ಈ ಎಲ್ಲ ಮಾತುಗಳು, ಯಾರು ತಮ್ಮ ಅಧಿಕಾರದ, ಸ್ಥಾನದ ಗೌರವಕ್ಕೆ, ಜವಾಬ್ದಾರಿಗೆ ತಕ್ಕಂತೆ ನಿರ್ವಹಿಸಿದ್ದರೋ ಅವರಿಗೆ ಮಾತ್ರವೇ ಅನ್ವಯಿಸುತ್ತದೆಯೇ ಹೊರತು, ಅನ್ಯಾಯದ ರಾಜಕಾರಣದಿಂದ ಮೇಲೆ ಬಂದು ಗದ್ದುಗೆಯನ್ನೇರಿದವರಿಗಲ್ಲ! ಮತ್ತು ಇನ್ನೊಂದು ದೃಷ್ಟಿಯಲ್ಲಿ ನೋಡಿದಾಗೆ, ಯಾರು ಯಾವುದೇ ಸ್ಥಾನದಲ್ಲಿರಲಿ, ಆ ಸ್ಥಾನದ ಕರ್ತವ್ಯವನ್ನು ಬಣ್ಣಿಸುವ ಕಾಗದದ ಮೇಲಿನ ಇತಿಮಿತಿಗಳನ್ನು ಮೀರಿ, ನಾಲ್ಕು ಸಮಸ್ತರ ಸಲುವಾಗಿ ತ್ಯಾಗಪೂರ್ವಕ ಕರ್ಮ ಮಾಡಿದ್ದೇ ಆದರೆ ಅವರ ಆ ತ್ಯಾಗ, ಚಿಂತನೆ, ರಾಷ್ಟ್ರಭಕ್ತಿ ಶ್ಲಾಘನೀಯವೇ ಸರಿ.
ಇದೇ ನಾನು ‘ಬೇಕು’ ಎಂದು ಹೇಳಿದ ‘ಪರಚಿಂತೆ!’ ಅರ್ಥಾತ್, ಬಸವಣ್ಣನವರೂ ಅಂಥ ಇತರ ಮಹಾತ್ಮರೂ ಸರಿಯೆಂದು, ಧರ್ಮವೆಂದು ಎತ್ತಿಹಿಡಿದ ತತ್ವ.
ಇನ್ನೂ ಯೋಚಿಸಿ ನೋಡಿದರೆ ಹೊಳೆಯುತ್ತದೆ – ಈ ಪರಚಿಂತೆಯ. ಬಹುಜನಹಿತದ ತತ್ವವೇ ಮಾನವನ ಸಂಸ್ಕೃತಿಯ ಅಡಿಪಾಯ; ನಿಜಕ್ಕೂ ಅದೇ ಪ್ರಗತಿಯ ಪ್ರೇರಕಶಕ್ತಿ. ವಿಜ್ಞಾನ, ಕಲೆ, ಕುಟುಂಬವ್ಯವಸ್ಥೆ, ವ್ಯಾಪಾರ, ವ್ಯವಹಾರ, ಸಾಮಾಜಿಕ-ಸಾಮುದಾಯಿಕ ಸಂಬಂಧಗಳು, ನ್ಯಾಯ-ನೀತಿ-ಧರ್ಮ, ಕೊನೆಗೆ ಅತ್ಯಂತ ವೈಯಕ್ತಿಕವೆಂದು ತೋರುವ ಅಧ್ಯಾತ್ಮ ಕೂಡ, ಹೀಗೆ ಪ್ರತಿಯೊಂದೂ ಪರಚಿಂತೆಯಿಂದಲೇ ಹುಟ್ಟಿ ಬೆಳೆದ ಶಾಸ್ತ್ರಗಳು. ರಾಜಕೀಯ ಪದ್ಧತಿಗಳಾದ ರಾಜಾಡಳಿತ, ಪ್ರಜಾಸತ್ತೆ, ಸಮಾಜವಾವ, ಕಮ್ಮುನಿಸಂ ಇವೆಲ್ಲವೂ ಬಹುಜನರ ಶ್ರೇಯಸ್ಸನ್ನು ಆದರ್ಶವಾಗಿಟ್ಟುಕೊಂಡ ವ್ಯವಸ್ಥೆಗಳೇ. ಕೇವಲ ಸ್ವಾರ್ಥವನ್ನು ಆದರಿಸಿದ ಯಾವುದೇ ವ್ಯವಸ್ಥೆಯಾದರೂ ಅದು ಸಂಸ್ಕೃತಿಗೆ ಅಪವಾದ; ಅದಕ್ಕೆ ಮನ್ನಣೆಯಿಲ್ಲ. ಒಬ್ಬ ನಿರಂಕುಶಪ್ರಭು ಕೂಡ ತಾನು ತನ್ನ ಪ್ರಜೆಗಳ ಹಿತವನ್ನೇ ಕಾಯುತ್ತಿದ್ದೇನೆ ಎಂಬ ವಿಶ್ವಾಸ ಹುಟ್ಟುವಂತೆ ಆಳಿದರೆ ಮಾತ್ರ ಜನರ ಪ್ರೀತಿ ಗೌರವಗಳಿಗೆ ಪಾತ್ರನಾಗಿರುತ್ತಾನೆ; ಚರಿತ್ರೆಯಲ್ಲಿ ಸ್ಥಾನ ಗಳಿಸುತ್ತಾನೆ. ಹಾಗಲ್ಲದಿದ್ದರೆ ಅವನಿಗೆ ಒಬ್ಬ ದರೋಡೆಕೋರನ ಕುಖ್ಯಾತಿಯಷ್ಟೇ ಲಭ್ಯ.
ನಮ್ಮೆಲ್ಲರಿಗೂ ಸಮಾಜದಲ್ಲಿ ನಮ್ಮನಮ್ಮ ಸ್ಥಾನದ ಪ್ರಕಾರ ಅನೇಕ ಬಾಧ್ಯತೆಗಳಿವೆ. ನಮ್ಮ ರಾಷ್ಟ್ರ, ರಾಜ್ಯ, ಸಮುದಾಯ, ಪರಿಸರ, ನ್ಯಾಯವ್ಯವಸ್ಥೆ, ಉದ್ಯೋಗ, ಕುಟುಂಬ, ಇವೆಲ್ಲವುಗಳ ಬಗ್ಗೆ ಅನೇಕ ನಿಯಮಗಳಿಂದ ನಾವು ಬದ್ಧರು. ಈ ಕುಟುಂಬದಲ್ಲೂ ಬೇರೆಬೇರೆ ಸದಸ್ಯರ ವಿಷಯದಲ್ಲಿ ನಮ್ಮ ಬಾಧ್ಯತೆ ಒಂದೇ ಸಮನಲ್ಲ. ಹಾಗೆಯೇ ನಮ್ಮ ವೈಯಕ್ತಿಕ ವಿಚಾರದಲ್ಲೂ ನಮಗೆ ನಿರ್ದಿಷ್ಟ ಕರ್ತವ್ಯಗಳಿವೆ. ಇವೆಲ್ಲವನ್ನೂ ನಾವು ಕ್ರಮಾನುಸಾರ ನಡೆಸಲೇ ಬೇಕು. ಈ ಬಗೆಯ ‘ಪರಚಿಂತೆ’ಗಳಿಂದ ಯಾರಿಗೂ ವಿನಾಯಿತಿಯಿಲ್ಲ.
ರಾಷ್ಟ್ರನಾಯಕ-ನಿರ್ಮಾಪಕ ಸ್ವಾಮಿ ವಿವೇಕಾನಂದರ ಸಿಂಹಘರ್ಜನೆಯನ್ನು ನೆನಪಿಸಿಕೊಳ್ಳುವುದಾದರೆ, ಭಾರತೀಯರಾದ ನಮ್ಮ ಮಟ್ಟಿಗಂತೂ ಈ ಪರಚಿಂತೆ ಎನ್ನುವುದು ರಾಷ್ಟ್ರೀಯ ಆದರ್ಶವೇ ಹೌದು. ಈ ನೆಲದಲ್ಲಿ ಹುಟ್ಟಿರುವ ಎಲ್ಲ ಚರಿತ್ರಾರ್ಹ ಮಹಾವ್ಯಕ್ತಿಗಳೂ ತ್ಯಾಗದ ಜ್ವಲಂತ ಸಂಕೇತಗಳೇ ಆಗಿದ್ದಾರೆ. ಸಮುದಾಯದ ಒಳಿತಿಗಾಗಿ ವೈಯಕ್ತಿಕ ತ್ಯಾಗ, ರಾಷ್ಟ್ರೀಯ ಶ್ರೇಯಸ್ಸಿಗಾಗಿ ಭಾಷೆ-ಪ್ರಾಂತ-ಜಾತಿ-ಪಂಥಗಳನ್ನು ಆಧರಿಸಿದ ಪರಿಮಿತ ಆಸಕ್ತಿಗಳ ತ್ಯಾಗ ಅತ್ಯಾವಶ್ಯಕ ಎನ್ನುತ್ತಾರೆ ಸ್ವಾಮೀಜಿ. ‘ನಿಮ್ಮ ವೈವಾಹಿಕ ಜೀವನವೂ ಕೂಡ ಕೇವಲ ಕಾಮೋಪಭೋಗಕ್ಕಲ್ಲ; ಅದು ತ್ಯಾಗಕ್ಕೆ ಎಡೆಮಾಡಿಕೊಡಬೇಕು’ ಎಂದು ನೆನಪಿಸುತ್ತಾರೆ.
ಇದು ನಿಜಕ್ಕೂ ಅತ್ಯಂತ ಸ್ವಾರಸ್ಯದ, ಮನನೀಯ ವಿಚಾರ. ಮೇಲ್ನೋಟಕ್ಕೆ ಅತ್ಯಂತ ಸಾಮಾನ್ಯ ಅಥವಾ ಸ್ವಾರ್ಥಮಯವೆಂಬಂತೆ ಕಂಡುಬರುವ ವ್ಯಕ್ತಿಗಳ ಜೀವನಕ್ರಮ, ಹಠಾತ್ತನೆ ಉನ್ನತ ತ್ಯಾಗದ ದಿಕ್ಕಿದೆ ತಿರುಗಲು ಸಾಧ್ಯ.
ವಿವಿಧ ಮಹತ್ಕಾರ್ಯಗಳಿಗಾಗಿ ತಮ್ಮ ಸಾವಿರ-ಲಕ್ಷ-ಕೋಟಿ-ಶತಕೋಟಿ ರೂಪಾಯಿಗಳನ್ನು ದಾನ ಮಾಡುವ ಮಹನೀಯರು ಎಲ್ಲ ಕಾಲಕ್ಕೂ ಇದ್ದರು. ಆದರೆ, ಇವರೆಲ್ಲ ಅದಕ್ಕೆ ತಕ್ಕಂತಹ, ಇನ್ನೂ ಎಷ್ಟೋ ಪಾಲು ಮಿಗಿಲಾದ, ಸಂಪತ್ತನ್ನು ದೀರ್ಘಕಾಲದಿಂದಲೂ ಚಾಣಾಕ್ಷತೆಯಿಂದ ಸಂಪಾದಿಸಿ, ಸಂಗ್ರಹಿಸಿ ಇಟ್ಟಿದ್ದರಿಂದ ಮಾತ್ರವೇ ಈ ಬಗೆಯ ಬೃಹತ್ ಕೊಡುಗೆಯನ್ನು ಕೊಡಲು ಅವರಿಗೆ ಸಾಧ್ಯವಾದದ್ದಲ್ಲವೇ? ಹಾಗಾದರೆ, ಅಲ್ಲಿಯವರೆಗಿನ ಅವರ ಜೀವನಕ್ರಮವನ್ನು ಸ್ವಾರ್ಥ-ಲೋಭಪೂರ್ಣ ಎನ್ನಬಹುದೇ? ಖಂಡಿತ ಇಲ್ಲ! ಏಕೆಂದರೆ, ಸಾಮಾನ್ಯವಾಗಿ ಅಂತಹ ವ್ಯಕ್ತಿಗಳ ಜೀವನ ಸದಾ ಪರಚಿಂತೆಯಿಂದಲೇ ಪ್ರೇರಿತವಾಗಿರುತ್ತದೆ. ಸರಳತೆ ಅವರಲ್ಲಿ ಅಂತರ್ಗತವಾಗಿರುತ್ತದೆ. ವಾಸ್ತವವಾಗಿ, ತಮಗಿಂತ ಹೋಲಿಕೆಯಲ್ಲಿ ಅತಿ ಬಡವರಾದ ಕೋಟ್ಯಂತರ ಜನರಿಗಿಂತಲೂ ಇವರ ಮನಸ್ಸು, ಜೀವೆನ, ಆಲೋಚನೆ ಉದಾತ್ತವೂ ಸರಳವೂ ಆಗಿರುವ ಸಾಧ್ಯತೆಯೇ ಹೆಚ್ಚು! ಇದೇ ಮಾತು, ಯಾವುದೇ ಕೊರತೆಯಿಲ್ಲದಂತೆ ಬದುಕುವಂತೆ ತೋರುವ ಸಾಧು-ಸಜ್ಜನರಿಗೆಲ್ಲ ಅನ್ವಯಿಸುತ್ತದೆ. ಅದು ಹೇಗೆ ಎಂದು ಅರ್ಥಮಾಡಿಕೊಳ್ಳಲು ತೆರೆದ ಮನಸ್ಸು ಬೇಕಾಗುತ್ತದೆ, ಅಷ್ಟೇ.
ಹತ್ತಾರು ಇಲ್ಲವೇ ನೂರಾರು, ಸಾವಿರಾರು ಜನರನ್ನು ಸಾಗಿಸಬಲ್ಲ (ಬಸ್ಸು, ರೈಲು, ಹಡಗು ಇತ್ಯಾದಿ ) ವಿವಿಧ ವಾಹನಗಳಿವೆಯಷ್ಟೇ. ಇವುಗಳ ತೂಕ ಆ ಎಲ್ಲ ಪ್ರಯಾಣಿಕರ ತೂಕಕ್ಕಿಂತ ಎಷ್ಟೋ ಪಾಲು ಹೆಚ್ಚಾಗಿರಲೇ ಬೇಕು! ಇಲ್ಲದಿದ್ದರೆ ಅವುಗಳ ಸ್ಥಿರತೆ, ಸುರಕ್ಷತೆ ಸಂದೇಹಾಸ್ಪದ! ಅವುಗಳ ಇಂಧನಕ್ಷಮತೆಯನ್ನು ಒಂದು ಮೋಟಾರ್ ಸೈಕಲ್ ನೊಂದಿಗೆ ಹೋಲಿಸಿ, ನಿಷ್ಪ್ರಯೋಜಕ ಎನ್ನುವಂತಿಲ್ಲ! ಹಾಗೆಯೇ ಎತ್ತರಕ್ಕೆ ನಿಂತು ಹಣ್ಣು-ಹೂವು-ನೆರಳುಗಳನ್ನು ನೀಡುವ ಬೃಹತ್ ವೃಕ್ಷವೊಂದು, ಅಷ್ಟೇ ಆಳವೂ ವಿಶಾಲವೂ ಆದ ಬೇರಿನ ವ್ಯವಸ್ಥೆ ಹೊಂದಿದ್ದರಷ್ಟೇ ಅದಕ್ಕೆ ಉಳಿವು! ಒಟ್ಟಿನಲ್ಲಿ ಈ ಮಾತಿನ ಉದ್ದೇಶವೇನೆಂದರೆ, ಪರಹಿತಚಿಂತನೆ ಮಾಡಬೇಕೆನ್ನುವವನು, ಅದಕ್ಕೆ ತಕ್ಕಂತಹ, ಸ್ವಾರ್ಥದಂತೆ ಕಂಡುಬರುವ ಪೋಷಕ-ರಕ್ಷಕ ವ್ಯವಸ್ಥೆಯಿಂದ ಮುಕ್ತನಾಗಿರುವುದು ಇಂದಿನ ಸಮಾಜದಲ್ಲಿ ತೀರ ದುಸ್ಸಾಧ್ಯ.
ಇನ್ನು ಚರಮ ಪುರುಷಾರ್ಥವೆನಿಸಿದ ಮೋಕ್ಷ, ಅದಕ್ಕೆ ಸಾಧಕವಾದ ಆಧ್ಯಾತ್ಮಿಕತೆ ಇವು ಸಂಪೂರ್ಣ ವೈಯಕ್ತಿಕ; ಆದ್ದರಿಂದ ಈ ಕ್ಷೇತ್ರದಲ್ಲಿ ‘ಪರಚಿಂತೆ’ಗೆ ಅವಕಾಶವಿಲ್ಲ ಎನ್ನುವುದು ಸಾಮಾನ್ಯ ಕಲ್ಪನೆ. ಆದರೆ ಇಂಥದೇ ‘ಸುಖ’ದ ಹಂಬಲಿಕೆಯಲ್ಲಿದ್ದ ಶಿಷ್ಯ ನರೇಂದ್ರನ ಮನಸ್ಸಿನಿಂದ ಅದನ್ನು ಕಿತ್ತೊಗೆದು, ‘ಸರ್ವಜನಹಿತಸಾಧನೆಯಲ್ಲೇ ನಿನ್ನ ಮುಕ್ತಿ, ಪರಮಸುಖ ಅಡಗಿದೆ’ ಎಂದು ತಿಳಿಸಿಕೊಟ್ಟವರು ಸಾಧಕವರೇಣ್ಯರಾದ ಶ್ರೀರಾಮಕೃಷ್ಣರು. ರಾಜಯೋಗ, ಧ್ಯಾನಯೋಗಗಳ ಮರ್ಮವನ್ನು ಆಮೂಲಾಗ್ರವಾಗಿ ಅರಿತವರು ಅವರು; ಹಾಗೆಯೇ ಸ್ವಾಮಿ ವಿವೇಕಾನಂದರು ಕೂಡ. ಆದರೆ ಇಂದಿನ ನಾಗರೀಕತೆಗೆ, ಯುಗಕ್ಕೆ, ‘ಪರಚಿಂತೆ’ಯನ್ನು ಆಧರಿಸಿದ ಸಾಧನೆಯೇ ಶ್ರೇಷ್ಠವೆಂದು ಸಾರಿದವರು ಸ್ವಾಮೀಜಿ. ಲೋಕಹಿತಕಾರ್ಯಕ್ಕೆ, ಧರ್ಮಬೋಧನೆಗೆ ಸಂಬಂಧಿಸಿದಂತೆ ಶ್ರೀರಾಮಕೃಷ್ಣರು ಆಡಿದ, “ನಾವು ಕೇವಲ ಜೀವರ ಸೇವೆ ಮಾಡಬಲ್ಲೆವಷ್ಟೇ, ಉಪಕಾರವಲ್ಲ” ಎಂಬ ಮಾತುಗಳಲ್ಲಿ ಕರ್ಮಯೋಗದ ಅತ್ಯುನ್ನತ ಆದರ್ಶವನ್ನು ಮನಗಂಡು, ಅದರ ಪ್ರಸಾರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಸಿದವರು ಅವರು. ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಇದು ಸ್ವಾಮೀಜಿಯವರು ನಮ್ಮ ಮುಂದಿಟ್ಟ ಧ್ಯೇಯವಾಕ್ಯ.
ಹಾಗಾದರೆ ಬಸವಣ್ಣನವರು ಬೇಡವೆಂದು ಹೇಳಿದ ‘ಪರಚಿಂತೆ’ ಯಾವುದು ಎಂದರೆ, ಪರೋಪಕಾರದ ನೆಪದಲ್ಲಿ ಗುಪ್ತವಾಗಿಯೋ ವ್ಯಕ್ತವಾಗಿಯೋ ಸ್ವಾರ್ಥದ ದೃಷ್ಟಿಯಿಂದ ಮಾಡಿದ ಕೆಲಸ; ತನ್ನ ಬಾಯಿ ಚಪಲವನ್ನು ತಣಿಸಲು ಆಡಿದ ಮಾತು; ತನ್ನ ಅಹಂಕಾರವನ್ನು ಮೆರೆಸಲು ಮಾಡಿದ ದಾನ ಅಥವಾ ತ್ಯಾಗ ಇವನ್ನು ಉದಾಹರಣೆಯಾಗಿ ಹೇಳಬಹುದು. ಆದರೆ ಕಾಲಕ್ರಮದಲ್ಲಿ ಇವುಗಳನ್ನು ಕೂಡ ಉದಾತ್ತೀಕರಿಸುವ ಸಾಧ್ಯತೆ ಇದ್ದೇ ಇದೇ ಎನ್ನುವುದು ಬೇರೊಂದು ವಿಚಾರ.
ಇಷ್ಟಾದರೂ, ಯಾವಯಾವ ಕಾಲ-ದೇಶಕ್ಕೆ ಯಾವುದು ಯೋಗ್ಯವಾದ ಪರಚಿಂತೆ, ಯಾವುದು ಸ್ವಾರ್ಥವೆನಿಸುತ್ತದೆ, ಯಾವುದು ಪರಾರ್ಥವೆನಿಸುತ್ತದೆ ಎಂದು ತಿಳಿಸುವ ಏಕಮೇವ ಸೂತ್ರವಿಲ್ಲ. ಈ ಧರ್ಮಸೂಕ್ಸ್ಮ ವಿಚಾರದಲ್ಲಿ ನಿಜವಾದ ಮಾರ್ಗದರ್ಶನವೆಂದರೆ, ಅದು (ತೈತ್ತಿರೀಯೋಪನಿಷತ್ತಿನಲ್ಲಿ ಹೇಳುವಂತೆ) ಮಹಾತ್ಮರ ಜೀವನ ಬೋಧನೆಗಳಲ್ಲೇ ಸಿಗಬೇಕು. ಅಥವಾ, ಸ್ವಾರ್ಥ ಹಾಗೂ ಪೂರ್ವಗ್ರಹ ಮುಕ್ತವಾದ ನಮ್ಮ ಅಂತಃಕರಣದಲ್ಲಿ ಮೂಡಬೇಕು. ಆದ್ದರಿಂದ, ಜಿಜ್ಞಾಸೆಯ ಸಂದರ್ಭಗಳಲ್ಲಿ ನಮ್ಮನಮ್ಮ ಶಕ್ತಿ-ಆದರ್ಶ-ದೃಢತೆಗಳಿಗೆ ತಕ್ಕಂತೆ, ಸರಿ-ತಪ್ಪುಗಳ, ನ್ಯಾಯ-ಅನ್ಯಾಯಗಳ ವಿವೇಚನೆಯ ನಿರ್ಧಾರ ಕೈಗೊಳ್ಳುವಂತೆ ಒಂದಿಷ್ಟು ಪ್ರಚೋದನೆ ನೀಡುವುದಷ್ಟೇ ಈ ಲೇಖನದ ಸಾಧ್ಯತೆ.
ಈ ಮಾತುಗಳೆಲ್ಲ ವ್ಯಾಕರಣದ ಹಾಗೆ, ಕಬ್ಬಿಣದ ಕಡಲೆಯ ಹಾಗೆ ತೋರುತ್ತಿದೆ ಇಂದಿರಾ? ನಿಜ; ನನಗೂ ಹಾಗೆ ಅನ್ನಿಸುತ್ತಿದೆ! ಇವು ತಿಳಿಯಾಗಿ ತಿಳಿಯಬೇಕಾದರೆ ಸೂಕ್ತವಾದ ನಿಜಜೀವನಪ್ರಸಂಗಗಳನ್ನು ನೋಡಬೇಕು. ಅವನ್ನು ಬಹಳ ಸ್ಪುಟವಾಗಿ ತಿಳಿಸಿಕೊಡುವಂತಹ ಪುಸ್ತಕಗಳೂ ಜೀವನಪ್ರಸಂಗಗಳೂ ಅಸಂಖ್ಯ. ಅವುಗಳಲ್ಲಿ ನನಗೆ ತುಂಬಾ ಮೆಚ್ಚುಗೆಯಾದ ಒಂದೆರಡನ್ನು ಮಾತ್ರ ಇಲ್ಲಿ ಸುಮ್ಮನೆ ಉದ್ಧರಿಸಿ ಈ ಕಗ್ಗ (ಕಗ್ಗಂಟ)ವನ್ನು ಮುಗಿಸುತ್ತೇನೆ. ಅವು ಅದೆಷ್ಟು ಶಕ್ತ-ಸರಳ-ಸುಂದರ ಎಂದು ನೀವೇ ನೋಡಿ:
೧. "ಕೃತಜ್ಞತೆ! ಇದು ಸಂಸ್ಕೃತಿಯ ಪರಾಕಾಷ್ಠೆ! ....."
೨. "ಪಡೆದ ಉಪಕಾರವನ್ನು ಮರೆಯುವುದು ಧೂರ್ತತನ... ....."
ಮೂಲ: ಮಿಂಚಿನ ಗೊಂಚಲು
ಲೇಖಕರು: ಸ್ವಾಮಿ ಪುರುಷೋತ್ತಮಾನಂದಜೀ
ಲೇಖಕರ ಬಗ್ಗೆ:
ಎಚ್.ವಿ.ವಿಶ್ವನಾಥ್
ಬಾಲ್ಯದಿಂದಲೂ ಬೆಂಗಳೂರು ರಾಮಕೃಷ್ಣ ಮಠ ನಡೆಸುವ ವಿವೇಕಾನಂದ ಬಾಲಕಸಂಘ – ಯುವಕಸಂಘಗಳ ಸಕ್ರಿಯ ಸದಸ್ಯರಾಗಿದ್ದ (೧೯೭೨-೯೪) ಎಚ್.ವಿ.ವಿಶ್ವನಾಥ್, ಅಲ್ಲಿನ ಗಾಯನ, ಸಾಹಿತ್ಯಕ, ಸಾಂಘಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಒಲವು ಬೆಳೆಸಿಕೊಂಡರು. ಇಂಜಿನಿಯರಿಂಗ್ ಪದವಿಯ ನಂತರ ಕೆಲಕಾಲ ಅಧ್ಯಾಪನ ವೃತ್ತಿ ನಡೆಸಿದರು. ಆದರೆ ಸ್ವಾಮಿ ಪುರುಷೋತ್ತಮಾನಂದಜೀ ಅವರ ನಿರ್ದೇಶನನದಲ್ಲಿ ಬರವಣಿಗೆ, ಅನುವಾದ, ಗ್ರಂಥಸಂಪಾದನೆಗಳಲ್ಲಿ ತೊಡಗಿ, ಅದನ್ನೇ ವೃತ್ತಿಯಾಗಿಸಿಕೊಂಡರು. ಮುಂದೆ ದಿವ್ಯತ್ರಯರ ನಾಮಾಂಕಿತ ಸಂಸ್ಥೆಗಳ ಸದಸ್ಯರಿಗೆ ಭಜನಸಂಗೀತ ಹೇಳಿಕೊಡುವ ಕಾಯಕ. ಸಾರ್ವಜನಿಕರಿಗೆ, ವಿಶೇಷತಃ ಎಳೆಯರಿಗೆ, ಭಜನೆ ಹೇಳಿಕೊಡುವ ಸಲುವಾಗಿ ‘೯೦ರ ದಶಕದಲ್ಲಿ ‘ಶಾರದಾ ಗುರುಕುಲ’ದ ಸ್ಥಾಪನೆ; ತನ್ಮೂಲಕ ಗುರುಸನ್ನಿಧಿಯಲ್ಲಿ ತಾವು ಕಲಿತಿದ್ದ ಅಸಂಖ್ಯ ಸದ್ವಿಚಾರಗಳನ್ನು ಪಸರಿಸುವ ಪ್ರಯತ್ನ. ಈವರೆಗೆ, ತಮ್ಮ ಸಂಗಡಿಗರೊಂದಿಗೆ ವಿವಿಧ ವೇದಿಕೆಗಳಲ್ಲಿ ನೂರಾರು ಭಜನೆಯ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ಇಬ್ಬರು ವಿದ್ಯಾರ್ಥಿನಿಯರು ಹಾಡಿದ ‘ಸಿರಿ ರಾಮಕೃಷ್ಣ’, ‘ನನ್ನ ಜನನಿ…’, ‘ಬಂದು ನಿಂದಿಹ ನೋಡಿ’ ಎಂಬ ಭಜನೆಯ ಧ್ವನಿಮುದ್ರಿಕೆಗಳು ಮತ್ತು ಸಂಪೂರ್ಣ ಗೀತಾ ಪಠಣವನ್ನು ಒಳಗೊಂಡ ‘ಗೀತಾಮೃತಮ್’ ಸಿ.ಡಿ ಜನಪ್ರಿಯತೆ ಗಳಿಸಿವೆ. ಈ ನಿಟ್ಟಿನಲ್ಲಿ ಅವರ ಪ್ರಯತ್ನ ಇನ್ನೂ ಮುಂದುವರೆದಿದೆ.
Add your articles
If you are interested to post your articles on our website, please send in your articles here. Also, send us a brief description about yourself to include in about author’s column.
Error: Contact form not found.