(೨೦೦೭ ಫೆಬ್ರವರಿಯ ‘ವಿವೇಕಹಂಸ’ದಲ್ಲಿ ಪ್ರಕಟವಾದ, ಸ್ವಾಮಿ ಪುರುಷೋತ್ತಮಾನಂದಜೀ ಸ್ಮರಣಾರ್ಥ ಲೇಖನ)
ಜ್ವಲಂತ ಜ್ಯೋತಿ
ವಿವೇಕಾನಂದ ಬಾಲಕಸಂಘ (ಹಾಗೂ ಅದರ ಮುಂದುವರಿಕೆಯಾದ ವಿವೇಕಾನಂದ ಯುವಕಸಂಘ) ಬೆಂಗಳೂರು ರಾಮಕೃಷ್ಣ ಮಠದ ಆಶ್ರಯದಲ್ಲಿ ಕಳೆದ ೫೨ ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಸ್ಥೆ. ಬಾಲಕರ ಸರ್ವತೋಮುಖ ಬೆಳವಣಿಗೆ, ಮುಖ್ಯವಾಗಿ ವ್ಯಕ್ತಿತ್ವ ನಿರ್ಮಾಣ, ಶೀಲನಿರ್ಮಾಣ, ಇದು ಸಂಘದ ಗುರಿ; ಅದಕ್ಕೆ ತಕ್ಕಂತೆ ಅದರ ಚಟುವಟಿಕೆಗಳು. ಬಾಲಕರ ಶಾರೀರಿಕ, ಬೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ ವಿಕಾಸನಕ್ಕಾಗಿ ಇಲ್ಲಿನ ಸೌಲಭ್ಯಗಳು ಹತ್ತಾರು. ಆಟೋಟಗಳು, ಯೋಗಾಸನ-ಜಿಮ್ನಾಸಿಯಂಗಳು, ಸುಸಜ್ಜಿತ ಗ್ರಂಥಾಲಯ; ಕರ್ಮಯೋಗದ ಅನುಷ್ಠಾನಕ್ಕೆ ನೆರವಾಗುವ ವೈವಿಧ್ಯಮಯ ಸೇವಾ ಚಟುವಟಿಕೆಗಳು; ಪ್ರಾರ್ಥನೆ-ವೇದಮಂತ್ರ-ಭಜನೆ-ಸ್ತೋತ್ರಾದಿಗಳಲ್ಲಿ ನುರಿತವರಿಂದ ಶಿಕ್ಷಣ; ಹಿರಿಯರಿಂದ ಉಪನ್ಯಾಸ-ತರಗತಿಗಳು; ಕಾಲಕಾಲಕ್ಕೆ ಪ್ರಸಾದರೂಪದ ತಿಂಡಿ-ತೀರ್ಥ; ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಜಯಂತ್ಯುತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸದವಕಾಶ; ಶೈಕ್ಷಣಿಕ-ವೈಯಕ್ತಿಕ ವಿಚಾರಗಳಲ್ಲಿ ಮಾರ್ಗದರ್ಶನ; ಹತ್ತಾರು ಬಗೆಯ ಸ್ಪರ್ಧೆಗಳು-ಬಹುಮಾನಗಳು; ಇದಲ್ಲದೆ ಹೆಚ್ಚು ಅರ್ಹರಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನ ಮತ್ತಿತರ ಪ್ರೋತ್ಸಾಹಕ ಉಡುಗೊರೆಗಳು: ಒಂದೇ ಎರಡೇ! ಇವುಗಳ ಜೊತೆಗೆ ಸಮಾನಮನಸ್ಕರೂ ಸಚ್ಚರಿತ್ರರೂ ಆದ ಸ್ನೇಹಿತರ ಸಹವಾಸಲಾಭ. ಅದಕ್ಕೂ ಮಿಗಿಲಾಗಿ, ಈ ಸಂಘದ ಜವಾಬ್ದಾರಿ ಹೊತ್ತ ಒಬ್ಬರು ಸಮರ್ಥ ಆಶ್ರಮವಾಸಿಯ ವಾತ್ಸಲ್ಯಪೂರ್ಣ ಬೆಂಬಲ, ಮಾರ್ಗದರ್ಶನ! ಜೊತೆಗೆ, ಇತರ ಅನೇಕ ಸಾಧುಗಳ ಸತ್ಸಂಗ. ಇಂಥ ಅಪೂರ್ವ ತಾಣ ಎಷ್ಟೋ ಹುಡುಗರ ಪಾಲಿಗೆ ತಮ್ಮ ಮನೆಗಿಂತಲೂ ಹೆಚ್ಚು ಪ್ರಿಯವಾದರೆ ಆಶ್ಚರ್ಯವೇನು? ಇದು ಎರಡು ದಶಕಗಳ ಹಿಂದಿನ ಚಿತ್ರ.
ಆದರೆ, ಕಳೆದೆರಡು ದಶಕಗಳಲ್ಲಿ ನಮ್ಮ ಸಮಾಜದ ಕೌಟುಂಬಿಕ, ಶೈಕ್ಷಣಿಕ, ಮನೋರಂಜನಾ ಪ್ರವೃತ್ತಿಗಳು ತೀವ್ರವಾಗಿ ಬದಲಾಗಿದೆಯಷ್ಟೆ? ಅದಕ್ಕೆ ತಕ್ಕಂತೆ ಬಾಲಕಸಂಘದ ಕಾರ್ಯಕ್ರಮಗಳ ಸ್ವರೂಪವೂ ಅನಿವಾರ್ಯವಾಗಿ ಬದಲಾಗಿದೆ. ಹಿಂದೆ, ಬಾಲಕರ ಹೊರಾಂಗಣ ಆಟ, ಶ್ರಮದಾನ, ತರಗತಿ, ಭಜನೆ, ವೇದಘೋಷಗಳೇ ಮೊದಲಾದ ಚಟುವಟಿಕೆಗಳಿಂದ ಪ್ರತಿದಿನವೂ ಗಿಜಿಗುಡುತ್ತಿದ್ದ ಸಂಘದ ಕಾರ್ಯಕ್ರಮಗಳೀಗ ಹೆಚ್ಚಾಗಿ ಭಾನುವಾರ ಹಾಗೂ ವಿಶೇಷದಿನಗಳಿಗೆ ಸೀಮಿತ. ಆದರೂ ಬಾಲಕಸಂಘದ ಮೂಲ ಆದರ್ಶ, ಉದ್ದೇಶಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಇದರ ಹಿರಿ-ಕಿರಿಯ ಸದಸ್ಯರು ವರ್ಷವಿಡೀ ಮಠದ ಸ್ವಯಂಸೇವಕರಾಗಿ ಸಕ್ರಿಯರಾಗಿರುವ ದೃಶ್ಯ ಕಾಣಸಿಗುತ್ತದೆ.
ಈ ಸಂಘದ ಕಾರ್ಯಕ್ರಮಗಳ ವಿವರಗಳೇನೇ ಇರಲಿ; ಇದರ ಸದಸ್ಯರಾಗುವ ಅವಕಾಶ ದೊರೆತವರು ಸುದೈವಿಗಳೇ ಸರಿ. ಇಲ್ಲಿ ಗಳಿಸುವ ಲಾಭ, ಕಲಿತ ಪಾಠಗಳು ನಮ್ಮ ಪಾಲಿಗೆ ಜೀವನದುದ್ದಕ್ಕೂ ಬೆಳಕಾಗಬಲ್ಲವು; ಮಾತ್ರವಲ್ಲ, ಆ ಬೆಳಕು ಇನ್ನಿತರರ ಪಾಲಿಗೂ ಒದಗೀತು. ಈ ಮಾತಿಗೆ ನಿದರ್ಶನರಾಗಿರುವ ಹಿಂದಿನ ಸದಸ್ಯರು ನೂರಾರು. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿನ ತಮ್ಮ ಸಾಧನೆಗಳಿಂದ ಖ್ಯಾತರಾಗಿರುವವರು ಹಾಗಿರಲಿ; ತಮ್ಮತಮ್ಮ ಸೀಮಿತ ಪರಿಧಿಗಳಲ್ಲಿ ಇದ್ದುಕೊಂಡೇ, ಹಿಂದಿನ ಅನುಭವದ ಫಲವನ್ನು ಸವಿಯುತ್ತ, ಹಂಚುತ್ತಾ, ಸಾರ್ಥಕ ಜೀವನ ನಡೆಸುತ್ತಿರುವವರು ಹಲವಾರು. (ಬಾಲ್ಯದಲ್ಲಿ ಸಹಜವಾಗಿ ಮೈಗೂಡಿಸಿಕೊಂಡ ಕ್ರೀಡಾಪಟುತ್ವ, ಸಂಗೀತ-ನಾಟಕಾದಿ ಕಲಾಪ್ರತಿಭೆ, ಕಾರ್ಯದಕ್ಷತೆ, ಸಂಘಟನೆ, ನಾಯಕತ್ವ, ವಾಕ್ಪಟುತ್ವ, – ಅಷ್ಟೇಕೆ, ಪೊರಕೆ ಹಿಡಿದು ಕಸಗುಡಿಸುವಲ್ಲಿನ ಅಚ್ಚುಕಟ್ಟುತನ ! – ಇಂಥ ಲೌಕಿಕಲಾಭಗಳಿಂದಲೇ ಉನ್ನತಿಗೇರಿದವರು ಹಲವರು) ಕನಿಷ್ಠಪಕ್ಷ, ಆ ಸುದಿನಗಳ ಸವಿಯನ್ನು ಮೆಲುಕು ಹಾಕುವ ಭಾಗ್ಯ ದೊರೆತರೂ ಕಡಿಮೆಯೇನಲ್ಲ. ಇದೀಗ ಈ ಲೇಖನದ ಮೂಲಕ ನಾನು ಮಾಡಲು ಯತ್ನಿಸುತ್ತಿರುವುದು ಅದನ್ನೇ.
ಸ್ವಾಮಿ ಪುರುಷೋತ್ತಮಾನಂದಜೀ ಅವರ ಪಾತ್ರ: ನಾನು ಸಂಘದ ಸಕ್ರಿಯಸದಸ್ಯನಾಗಿದ್ದ (೧೯೭೧-೯೪) ಅವಧಿಯಿಡೀ ಅದರ ನಿರ್ದೇಶಕರಾಗಿದ್ದವರು, ಜನಕೋಟಿಯ ಪಾಲಿಗೆ ಅವಿಸ್ಮರಣೀಯರಾದ ಸ್ವಾಮಿ ಪುರುಷೋತ್ತಮಾನಂದಜೀ. ಒಟ್ಟು ೩೩ ವರ್ಷ ಈ ಸ್ಥಾನದಲ್ಲಿದ್ದ ಪೂಜ್ಯ ಸ್ವಾಮೀಜಿಯವರು, ಸಂಘದೊಂದಿಗೇ ತಾವೂ ಬೆಳೆಯುತ್ತ ಬಂದವರು. ಸ್ವಾಮಿ ಯತೀಶ್ವರಾನಂದಜೀ ಅವರಂತಹ ತ್ರಿವಿಕ್ರಮರಿಂದ ಸ್ಥಾಪಿತವಾಗಿ, ಇತರ ಹಿರಿಯ ಸನ್ಯಾಸಿಗಳು ಕೆಲವು ವರ್ಷ ನಡೆಸಿದ್ದ ಸಂಸ್ಥೆ ಈ ಬಾಲಕಸಂಘ. ಇದನ್ನು ಸಾಕಿ ಮುನ್ನಡೆಸುವ ಕೆಲಸ, ಹೊಸದಾಗಿ ಬ್ರಹ್ಮಚಾರಿಯಾಗಿ ಆಶ್ರಮಕ್ಕೆ ಸೇರಿದ್ದ ಸ್ವಾಮೀಜಿಯವರಿಗೆ ಸುಲಭದ್ದೇನೂ ಆಗಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿಬೆಳೆದು, ಪ್ರೌಢಶಾಲಾ ಶಿಕ್ಷಣವನ್ನಷ್ಟೇ ಮುಗಿಸಿದ್ದವರು ಅವರು. ಹಾಗಿದ್ದರೂ ತಮ್ಮ ಅಪೂರ್ವ ಭಾವನಾಶಕ್ತಿ, ಕ್ರಿಯಾಶಕ್ತಿ, ಇಚ್ಛಾಶಕ್ತಿ, ಧೀಶಕ್ತಿಗಳಿಂದ ಅವರು ಸಂಘದ ನಿರ್ದೇಶಕಸ್ಥಾನವನ್ನು ಅತಿಸಮರ್ಥವಾಗಿ ತುಂಬಿದರು. ಮಾತ್ರವಲ್ಲ; ಹತ್ತಾರು ವರ್ಷಗಳ ಅವಧಿಯಲ್ಲಿ ಸಂಘದ ಶಕ್ತಿ-ಸಾಧ್ಯತೆಗಳನ್ನು ವಿಸ್ತರಿಸುತ್ತ, ಅದರ ನಿರ್ದೇಶಕರು ಎಂತಹ ಮಹತ್ತರ ಪಾತ್ರ ವಹಿಸಬಲ್ಲರು ಎಂಬುದನ್ನೂ ತೋರಿಸಿಕೊಟ್ಟರು.
ಬಾಲಕಸಂಘದಂತಹ ಒಂದು ಸಂಸ್ಥೆಯ ಹಾಗೂ ಅದರ ನಿರ್ದೇಶಕರ ನಡುವಿನ ಸಂಬಂಧ ಅತಿನಿಕಟ; ಅವರು ಪರಸ್ಪರ ಅಭಿನ್ನವೆಂದರೂ ತಪ್ಪಿಲ್ಲ. ಆ ಸಂಸ್ಥೆಯ ವ್ಯಕ್ತಿತ್ವವೆನ್ನುವುದು ಅದರ ನಿರ್ದೇಶಕರ ವ್ಯಕ್ತಿತ್ವದ ಪ್ರತಿಫಲನವೇ ಸರಿ. ಅವರ ಎಲ್ಲ ಗುಣಾವಗುಣಗಳನ್ನೂ ಒಟ್ಟಾರೆ ಸಂಘ ಸದಾ ಪ್ರತಿಬಿಂಬಿಸುತ್ತಿರುತ್ತದೆ. ಆತನ ಶಕ್ತಿಯೇ ಸಂಘದ ಶಕ್ತಿ; ಆತನ ಕಲ್ಪನೆ, ಭಾವನೆಗಳನ್ನು ಮೀರಿ ಸಂಘ ಬೆಳೆಯಲಾರದು. ಇವೆಲ್ಲ ಸರಳ ಸತ್ಯಗಳೆಂಬಂತೆ ತೋರಬಹುದು; ಆದರೆ ಇವುಗಳ ಸತ್ಯತೆ ನಮಗೆ ಗೋಚರವಾಗಿ ಮಾನವರಿಕೆಯಾದದ್ದು ಸ್ವಾಮೀಜಿಯವರ ಕಾರ್ಯವೈಖರಿಯನ್ನು ಗಮನಿಸುವ ಶಕ್ತಿ ಬಂದಮೇಲೆಯೇ. ಸಂಘದೊಂದಿಗೇ ತಮ್ಮನ್ನು ತೀವ್ರವಾಗಿ ಗುರುತಿಸಿಕೊಂಡಿದ್ದ ಸ್ವಾಮೀಜಿಯವರ ಮನಸ್ಸು ಪ್ರತಿಘಳಿಗೆಯೂ ಅದರ ಬಗ್ಗೆ ಚಿಂತನೆ ನಡೆಸುತ್ತಿತ್ತು; ಹೊಸಹೊಸ ಯೋಜನೆಗಳನ್ನು ಹೂಡುತ್ತಿತ್ತು. ಅದರ ಪ್ರತಿಯೊಬ್ಬ ಸದಸ್ಯನನ್ನೂ ಸದಾ ಸೂಕ್ಷ್ಮದೃಷ್ಟಿಯಿಂದ ಗಮನಿಸುತ್ತಾ, ಸಂಘ-ಸದಸ್ಯರು ಪರಸ್ಪರರಿಗೆ ಲಾಭಕಾರಿಯಾಗುವಂತಾಗಲು ಯಾವ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು ಎಂದು ಯೋಚಿಸುತ್ತಿದ್ದರು. ನಿಜಕ್ಕೂ ಅವರು ಸಂಘಕ್ಕೆ, ಸಂಘದ ಸದಸ್ಯರಿಗೆ ಯಾವ ಯಾವ ರೀತಿಯಲ್ಲಿ ನಿರ್ಧಿಷ್ಟವಾದ ಕೊಡುಗೆಗಳನ್ನು ನೀಡಿದರು, ಬಾಲಕರ ಜೀವನಗಳನ್ನು ಹೇಗೆ ತಿದ್ದಿ ಪ್ರಭಾವ ಬೀರಿದರು ಎನ್ನುವುದು ಕಲ್ಪನಾತೀತ. ಅದನ್ನು ತಿಳಿಸಬೇಕೆಂದರೆ, ಹಾಗೆ ಪ್ರಭಾವಕ್ಕೊಳಗಾದ ನೂರಾರು ಸದಸ್ಯರು ಒಬ್ಬೊಬ್ಬರೂ ಹತ್ತಾರು ಲೇಖನಗಳನ್ನು ಬರೆಯಬೇಕಾದೀತು! (ಹಾಗೆ ಬರೆಯುವುದೇನೋ ಸಾರ್ಥಕಯತ್ನವೇ ಸರಿ!)
‘ಬಾಲದೇವೋ ಭವ’: ಈಗ ನಾನಿಲ್ಲಿ ಹೇಳಹೊರಟಿರುವುದು, ಒಂದು ನಿರ್ಧಿಷ್ಟ ವಿಚಾರದ ಕುರಿತಂತೆ ಸ್ವಾಮಿ ಪುರುಷೋತ್ತಮಾನಂದಜೀ ಅವರು ತಳೆದ ಧೋರಣೆಯ ಬಗ್ಗೆ ಮಾತ್ರವೇ. ಅದು ಬಾಲಕರ ಸದಸ್ಯತ್ವಕ್ಕೆ ಸಂಬಂಧಿಸಿದ ಮೂಲಭೂತ ವಿಚಾರ. ಬಾಲಕಸಂಘದ ನಿಯಮಾವಳಿ ಹೇಗಿದೆಯೆಂದರೆ, ಅಲ್ಲಿ ಸದಸ್ಯರ ಸೇರ್ಪಡೆಗೆ ಮತ್ತು ಮುಂದುವರಿಕೆಗೆ ಬಿಗಿಯಾದ ಕಟ್ಟುಪಾಡುಗಳಿಲ್ಲ; ಅಷ್ಟೆಲ್ಲ ಸೌಲಭ್ಯಗಳಿದ್ದರೂ ಎಲ್ಲವೂ ಉಚಿತ – ಯಾವುದಕ್ಕೂ ವಂತಿಗೆ/ಶುಲ್ಕ ನೀಡಬೇಕಾಗಿಲ್ಲ. ನಡುನಡುವೆ ತೇರ್ಗಡೆಗೆ ಪರೀಕ್ಷೆಗಳಿಲ್ಲ! ಹುಡುಗನ ವಯಸ್ಸು ೮ ರಿಂದ ೧೫ ರ ನಡುವೆ ಇದ್ದರಾಯಿತು; ಆತನ ಬುದ್ಧಿಮತ್ತೆ, ಸ್ವಭಾವ, ನಡವಳಿಕೆ, ಇವೆಲ್ಲ ಸಾಧಾರಣವಾಗಿದ್ದರೂ ಸಾಕು; ಪ್ರವೇಶ ದೊರಕುತ್ತಿತ್ತು. ಆದರೆ ಇದು ಸಂಘದ ನಿರ್ದೇಶಕರಿಗೆ ಬಿಟ್ಟ ವಿಚಾರ. ಸೇರ್ಪಡೆಗೊಂಡ ಹುಡುಗರು ಆಗಾಗ ಬಿಟ್ಟುಹೋಗುವುದೂ ಅಷ್ಟೇ ಸಾಮಾನ್ಯ ವಿಚಾರ. ಪಾಠ ಓದಲು ಸಮಯವಿಲ್ಲವೆಂದೋ, ಮನೆಯವರಲ್ಲಿ ಆಶ್ರಮದ ಬಗ್ಗೆ ಅನುಮಾನ ಹುಟ್ಟಿತೆಂದೋ, ಅಥವಾ ಹುಡುಗನಿಗೇ ಇಲ್ಲಿಯ ವಾತಾವರಣ ಇಷ್ಟವಾಗಲಿಲ್ಲವೆಂದೋ (ಮಲ್ಲಿಗೆಯ ಪರಿಮಳವನ್ನು ಸಹಿಸದ ಬೆಸ್ತರಾಕೆಯಂತೆ!) ಏನೋ ಒಂದು ಕಾರಣ. ಆದರೆ, ಎಂಥ ಹುಡುಗನೇ ಆಗಲಿ, ಒಮ್ಮೆ ಸೇರಿದ ಮೇಲೆ ಬಿಟ್ಟುಹೋಗದಂತೆ ಎಲ್ಲರೂ ಸಾಧ್ಯವಾದಷ್ಟೂ ಪ್ರಯತ್ನ ಮಾಡಬೇಕು ಎಂಬ ನಿಯಮವನ್ನು ತಂದವರು ಸ್ವಾಮಿ ಪುರುಷೋತ್ತಮಾನಂದಜೀ. ಇದು ಅವರು ಸಾಕಷ್ಟು ಚಿಂತನೆಯ ಬಳಿಕ ಕೈಗೊಂಡ ಮಹತ್ತರ ನಿರ್ಧಾರ. ‘ಅನರ್ಹರು, ತಮಗಿದು ಬೇಡವೆನ್ನುವವರು, ಹೋದರೆ ಹೋಗಲಿ; ಸರಿಯಾದ ಕೆಲವರು ಉಳಿದುಕೊಂಡರೆ ಸಾಕು’ ಎನ್ನುವ ತತ್ವವನ್ನು ಅವರು ಆಚರಣೆಗೆ ತರಬಹುದಿತ್ತು. ಜಳ್ಳು ತೂರಿ ಕಾಳನ್ನಷ್ಟೇ ಉಳಿಸಿಕೊಳ್ಳುವ ಯೋಜನೆ ಎಲ್ಲರೂ ಒಪ್ಪುವಂಥದ್ದೇ. ಆದರೆ ಸ್ವಾಮೀಜಿಯವರು, ಈ ಸುಲಭೋಪಾಯಕ್ಕೆ ಮನಸ್ಸು ಕೊಡಲಿಲ್ಲ. “ಪ್ರತಿಯೊಬ್ಬನೂ ಅವನವನ ಸ್ಥಾನದಲ್ಲಿ ದೊಡ್ಡವನು” ಮತ್ತು “ನಾವೂ ದೇವರಾಗೋಣ, ಇತರರನ್ನೂ ದೇವರನ್ನಾಗಿಸೋಣ” ಎಂಬ ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಅವರು ಆದರ್ಶವಾಗಿಟ್ಟುಕೊಂಡರು; ಅವನ್ನೇ ಬಾಲಕಸಂಘದಲ್ಲಿ ದೃಢವಿಶ್ವಾಸದಿಂದ ರೂಢಿಗೊಳಿಸಿದರು.
ಆದರೆ ಬಾಲಕರಲ್ಲಿ ಅಶಿಸ್ತು, ಅನಿಯಮಿತತೆ, ಗೈರುಹಾಜರಿಗಳು ಸಾಮಾನ್ಯ. ಇಂಥವರನ್ನು ನೆಚ್ಚಿಕೊಂಡು ಕಾರ್ಯಕ್ರಮಗಳನ್ನು ನೆಡೆಸಲುಂಟೆ! ಇನ್ನು ಅವಿಧೇಯತೆ, ಕುಚೇಷ್ಟೆಯ ಮನೋವೃತ್ತಿಗಳೂ ಕಾಣಬರುವುದಿತ್ತು. ಇವೆಲ್ಲ ಎಷ್ಟರ ಮಟ್ಟಿಗೆ ಸಹ್ಯ? ಸಂಘದ ನಿಯಮಾವಳಿಗೆ ವಿರುದ್ಧ ಎನ್ನುವುದು ಹಾಗಿರಲಿ; ಇಂಥ ವರ್ತನೆ ಹಿರಿಯರ, ನಿರ್ದೇಶಕರ ‘ಹಿರಿತನ’ಕ್ಕೇ ಸವಾಲೊಡ್ಡುತ್ತದೆ. ಅವರ ಸಹನೆಯನ್ನು ಪರೀಕ್ಷಿಸಿ ರೊಚ್ಚಿಗೆಬ್ಬಿಸುತ್ತದೆ! ಇಂಥ ತರಲೆ ಹುಡುಗರನ್ನು ಓಡಿಸಿಬಿಡುವುದೇ ಅತ್ಯುತ್ತಮ ಉಪಾಯ ಎಂದು ಯಾರಿಗಾದರೂ ತೋರುತ್ತದೆ. ಸ್ವಾಮೀಜಿಯವರು ಮಾತ್ರ ಇಂಥ ಆಲೋಚನೆಗೆ ಇಂಬುಕೊಡುತ್ತಿರಲಿಲ್ಲ. ಹುಡುಗರನ್ನು ತಿದ್ದಿ ಸರಿದಾರಿಗೆ ತರಬೇಕು; ಸಮಾಜಕ್ಕೂ ಸಂಘಕ್ಕೂ ಉಪಯುಕ್ತರಾಗುವಂತೆ ಬೆಳೆಸಬೇಕು ಎಂಬ ಪ್ರಯತ್ನ, ಅದಮ್ಯ ಆಶಾವಾದ ಅವರದು. ಅಲ್ಲದೆ, ಬಾಲಕರಲ್ಲಿ ಶಿಸ್ತು, ಶೀಲ, ಸಂಯಮ, ಸ್ನೇಹಗಳೆಲ್ಲವೂ ಸ್ವಯಂಪ್ರೇರಿತವಾಗಿ ಬರಬೇಕೆ ಹೊರತು ಒತ್ತಡ-ಬೆದರಿಕೆಗಳಿಂದಲ್ಲ; ಅದಕ್ಕೆ ತಕ್ಕ ಪ್ರಚೋದನೆ, ವಾತಾವರಣ ನೀಡುವುದು ಹಿರಿಯರ ಕರ್ತವ್ಯ ಎಂಬುದು ಸಂಘದ ಧೋರಣೆ. ಈ ದೃಷ್ಟಿಯನ್ನು ಸ್ವಾಮೀಜಿಯವರು ಅನೇಕವರ್ಷಗಳ ಪ್ರಯತ್ನದಿಂದ ಜತನದಿಂದ ರೂಢಿಸಿದ್ದರು. ಬಾಲಕರ ಸ್ವಭಾವದ ಅಸಮತೆಗಳನ್ನೆಲ್ಲ ಸಹಿಸಿಕೊಳ್ಳುತ್ತ ಅವರನ್ನು ನಯಗೊಳಿಸುವ ಯತ್ನ ಮಾಡುತ್ತಬಂದರು. ತಮ್ಮ ಮೇಲ್ಪಂಕ್ತಿಯಿಂದ, ಈ ಬಗೆಯ ಸಹನೆ, ಸಮತೆ, ಸಮಾಧಾನದ ಸ್ವಭಾವವನ್ನು ಸಂಘದ ಸದಸ್ಯರಿಗೂ ಪರೋಕ್ಷವಾಗಿ ಕಲಿಸಿದರು. ನಿಜ ಹೇಳಬೇಕೆಂದರೆ, ‘ಮಕ್ಕಳು ದೇವರಿಗೆ ಸಮಾನ’ ಎಂಬ ಮಾತನ್ನು ಅವರು-ಹಾಗೆ ಬಾಯ್ಬಿಟ್ಟು ಸಾರದೆಯೇ-ಆಚರಣೆಗೆ ತಂದಿದ್ದರು.
ಸ್ವಾಮಿ ಪುರುಷೋತ್ತಮಾನಂದಜೀ ಅವರ ಇನ್ನೊಂದು ಪ್ರಮುಖ ಸಾಧನೆಯೆಂದರೆ, ‘ವ್ಯಕ್ತಿತ್ವನಿರ್ಮಾಣವೆಂಬುದು ೧೫ನೇ ವಯಸ್ಸಿಗೆ ಮುಗಿದುಹೋಗುವಂಥದ್ದಲ್ಲ; ವಾಸ್ತವವಾಗಿ ಅದು ಆಗಷ್ಟೇ ಆರಂಭ’ ಎಂಬ ತತ್ವವನ್ನು ಸದಸ್ಯರಲ್ಲಿ ಮನವರಿಕೆ ಮಾಡಿಸಿ, ಅವರೆಲ್ಲರೂ ನಿರಂತರವಾಗಿ ಸದಸ್ಯರಾಗಿ ಉಳಿದುಕೊಂಡು, ಆಶ್ರಮದ ಸಂಪರ್ಕದಲ್ಲಿದ್ದು ತಾವೂ ಬೆಳೆಯುತ್ತ ಇತರ ಬಾಲಕರ ಬೆಳವಣಿಗೆಗೂ ನೆರವಾಗುವಂತೆ ಮಾಡಿದುದು. ಈ ಹಂತದಲ್ಲಿ ವಿವೇಕಾನಂದ ಯುವಕಸಂಘ ಅಸ್ಥಿತ್ವಕ್ಕೆ ಬಂದು, ಸಂಘ ಹೊಸರೀತಿಯಲ್ಲಿ ಬೆಳೆಯಲಾರಂಭಿಸಿತು. ಇದನ್ನೊಂದು ವಿಶ್ವವಿದ್ಯಾಲಯದ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕೆಂಬ ಕನಸು-ಯೋಜನೆ ಸ್ವಾಮೀಜಿಯವರ ಮನಸ್ಸಿನಲ್ಲಿ ಸಾಕಷ್ಟು ಬೇರು ಬಿಟ್ಟಿತ್ತು. ಅದನ್ನವರು ಅನೇಕ ಹಿರಿಯರ ಮುಂದೆ ವ್ಯಕ್ತಪಡಿಸುತ್ತಲೂ ಬಂದಿದ್ದರು.
‘ಒಮ್ಮೆ ಸದಸ್ಯ, ಎಂದೆಂದಿಗೂ ಸದಸ್ಯ’: ಎಷ್ಟೇ ಆದರೂ ಸದಸ್ಯರು ಬಿಟ್ಟುಹೋಗುವುದನ್ನು ಪೂರ್ತಿಯಾಗಿ ತಪ್ಪಿಸಲು ಸಾಧ್ಯವೇ ಇಲ್ಲ. ಏಕೆಂದರೆ, ಉನ್ನತಶಿಕ್ಷಣ, ಉದ್ಯೋಗ ಮತ್ತಿತರ ಬಲವತ್ತರ ಕಾರಣಗಳಿರುತ್ತವೆ. ಹಾಗಾದರೆ, ಅವರಿನ್ನು ನಮ್ಮೊಡನಿಲ್ಲ, ಸಂಘದ ಸದಸ್ಯರಲ್ಲ ಎನ್ನೋಣವೇ? ಒಮ್ಮೆ ಈ ಬಗ್ಗೆ ಜಿಜ್ಞಾಸೆಯೆದ್ದಾಗೆ ಸ್ವಾಮೀಜಿ ಸಾರಿದರು: “ಇಲ್ಲ! ಒಮ್ಮೆ ಸದಸ್ಯನಾದವನು ಎಂದೆಂದಿಗೂ ಸದಸ್ಯ! ಅವನು ಯಾವಾಗ ಹಿಂದಿರುಗಿ ಬಂದರೂ ಮತ್ತೆ ಸಂಘಕ್ಕೆ ಮರಳಬೇಕು; ಅದರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ದೂರವಾಗಿದ್ದಾಗಲೂ ಅವನು ನಮ್ಮವನಾಗಿಯೇ, ನಮ್ಮ ಪ್ರತಿನಿಧಿಯಾಗಿ ಇರಬೇಕು.” ನಿಜಕ್ಕೂ ಇದೊಂದು ಅದ್ಭುತಕಲ್ಪನೆ. ಆ ದಿನಗಳಲ್ಲಿ ಸ್ವಾಮೀಜಿಯವರು ಇದನ್ನು ತಮ್ಮ ಆಕರ್ಷಕ, ಪ್ರಬಲ ಶೈಲಿಯಲ್ಲಿ ಬಣ್ಣಿಸಿದಾಗ, ನಮಗೆಲ್ಲ ಅದೊಂದು ರೋಮಾಂಚಕ ಭಾವನೆ!
ಈಗ ಈ ತತ್ವದ ಬಗ್ಗೆ ಸ್ವತಂತ್ರವಾಗಿ ಆಲೋಚಿಸುತ್ತಾ ಹೋದಂತೆ, ಅದರ ಹಿಂದಿನ ಔದಾರ್ಯ, ದೂರದೃಷ್ಟಿ, ಸಂಘದ ಮುಂದುವರಿಕೆಯ ಕಾಳಜಿ, ಸ್ನೇಹಭಾವದ ಬಗ್ಗೆ ಕಳಕಳಿ, ಪ್ರತಿಯೊಬ್ಬ ವ್ಯಕ್ತಿಗೂ ಕೊಟ್ಟ ಗೌರವ-ಬೆಲೆ ಹೀಗೆ ಎಷ್ಟೆಲ್ಲಾ ಅಂಶಗಳು ಅಡಗಿವೆ ಎಂದು ತೋರುತ್ತದೆ. ನಿಜಕ್ಕೂ ಅವು ನಾವು ನಮ್ಮ ನಿತ್ಯಜೀವನದಲ್ಲೂ ಅಳವಡಿಸಿಕೊಳ್ಳಲೇ ಬೇಕಾದ ಮೌಲ್ಯಗಳಲ್ಲವೇ?
Add your articles
If you are interested to post your articles on our website, please send in your articles here. Also, send us a brief description about yourself to include in about author’s column.
Error: Contact form not found.